ವೀರಾಜಪೇಟೆ, ಜೂ. ೨೯: ವಿಶೇಷ ಚೇತನರ ಕಲ್ಯಾಣಕ್ಕಾಗಿ ಅಗತ್ಯವಿರುವ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಭರವಸೆ ನೀಡಿದರು.
ವೀರಾಜಪೇಟೆಯ ಪುರಭವನದಲ್ಲಿ ನಡೆದ ಆರ್ಜಿ ಮತ್ತು ಬೇಟೋಳಿ ಗ್ರಾಮ ಪಂಚಾಯಿತಿ ಹಾಗೂ ವೀರಾಜಪೇಟೆ ಪುರಸಭೆ ವ್ಯಾಪ್ತಿಯ ವಿಶೇಷ ಚೇತನರ ಕುಂದು ಕೊರತೆ ಸಭೆ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎ.ಎಸ್. ಪೊನ್ನಣ್ಣ, ಶಾಸಕರ ಅನುದಾನದಲ್ಲಿ ಶೇ. ೧೫ರಷ್ಟನ್ನು ವಿಶೇಷ ಚೇತನರಿಗಾಗಿ ಮೀಸಲಿಡಬೇಕು ಎನ್ನುವ ನಿಯಮವಿದೆ. ವಿಶೇಷ ಚೇತನರ ಅಗತ್ಯತೆಯನ್ನು ನನ್ನ ಗಮನಕ್ಕೆ ತಂದರೆ ಅದಕ್ಕೆ ಸೂಕ್ತವಾದ ವಿನಿಯೋಗವನ್ನು ಮಾಡುತ್ತೇನೆ. ಅಷ್ಟು ಹಣವನ್ನು ನಿಮ್ಮ ಅಭಿವೃದ್ಧಿಗಾಗಿಯೇ ಬಳಸುತ್ತೇನೆ ಎಂದು ಹೇಳಿದರು.
ವಿಶೇಷಚೇತನರ ಒಕ್ಕೂಟದ ಸಂಚಾಲಕಿ ಆಯೇಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶೇಷ ಚೇತನರಿಗೆ ಇರುವ ಕುಂದುಕೊರತೆಗಳನ್ನು ಆಲಿಸುವಂತೆಯೂ ಹಾಗೂ ಸಮಾಜದ ಮುಖ್ಯವಾಹಿನಿಗೆ ಎಲ್ಲರಂತೆ ವಿಶೇಷಚೇತನರು ಬರಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ, ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಉಪಸ್ಥಿತರಿದ್ದರು.
ಸಭೆಯ ಮೊದಲಿಗೆ ಆರ್ಜಿ ಮತ್ತು ಬೇಟೋಳಿ ಹಾಗೂ ವೀರಾಜಪೇಟೆ ಪುರಸಭೆ ವ್ಯಾಪ್ತಿಯ ವಿಶೇಷಚೇತನರ ಪರವಾಗಿ ನೂತನ ಶಾಸಕ ಎ.ಎಸ್ ಪೊನ್ನಣ್ಣ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಸಭೆಯ ಬಳಿಕ ವಿಶೇಷ ಚೇತನರಿಂದ ಶಾಸಕ ಎ.ಎಸ್ ಪೊನ್ನಣ್ಣ ಕುಂದು-ಕೊರತೆ ಆಲಿಸಿ, ಮನವಿ ಸ್ವೀಕಾರ ಮಾಡಿದರು.