ಮಡಿಕೇರಿ, ಜೂ. ೨೮: ಸಹಕಾರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಲ್ಲಾರಂಡ ಮಣಿ ಉತ್ತಪ್ಪ ಅವರಿಗೆ ಚೆಟ್ಟಳ್ಳಿಯ ನಾಗರಿಕ ಸನ್ಮಾನ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ನಾಗರಿಕ ಸನ್ಮಾನ ಸಮಿತಿ ಅಧ್ಯಕ್ಷ ಕಣಜಾಲು ಪೂವಯ್ಯ ಈ ಬಗ್ಗೆ ಮಾಹಿತಿ ನೀಡಿ, ಕಳೆದ ೨೫ ವರ್ಷಗಳಿಂದ ಮಣಿ ಉತ್ತಪ್ಪ ಅವರು ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ನಷ್ಟದಲ್ಲಿದ್ದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಳೆದ ೧೫ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಇದೀಗ ಲಾಭದ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ. ಸಮಾಜ ಸೇವೆಯಲ್ಲಿ ೪೦ ವರ್ಷಗಳಿಂದ ತೊಡಗಿಸಿಕೊಂಡಿದ್ದು, ಗಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷಿಕರಾಗಿಯೂ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ರೈತರ ಪರವಾಗಿ ಉಪವಾಸ ಸತ್ಯಾಗ್ರಹ, ನಾಡಿನ ಒಳಿತಿಗಾಗಿ ಉರುಳು ಸೇವೆ ಮಾಡಿದ್ದಾರೆ. ಆದರೂ ಸಹಕಾರ ಕ್ಷೇತ್ರವಾಗಲೀ, ಸಮಾಜವಾಗಲೀ ಅವರನ್ನು ಗುರುತಿಸಿಲ್ಲ. ಹಾಗಾಗಿ ಚೆಟ್ಟಳ್ಳಿಯ ಜನತೆ ಸೇರಿಕೊಂಡು ನಾಗರಿಕ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ತಿಳಿಸಿದರು. ಜುಲೈ ೨ರಂದು ಬೆಳಿಗ್ಗೆ ೧೦ ಗಂಟೆಗೆ ಚೆಟ್ಟಳ್ಳಿಯ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ಹೇಳಿದರು.

ಸದಸ್ಯೆ ಮೇರಿ ಅಂಬುದಾಸ್ ಮಾತನಾಡಿ; ಮಣಿ ಉತ್ತಪ್ಪ ಯಾವುದೇ ಭೇದ ಭಾವವಿಲ್ಲದೆ ಎಲ್ಲರ ಕಷ್ಟಗಳಿಗೆ ಸ್ಪಂದಿಸುವವರಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದರೂ ಯಾರೂ ಅವರನ್ನು ಗುರುತಿಸಿಲ್ಲ, ಇನ್ನಾದರು ಸಹಕಾರಿ ಕ್ಷೇತ್ರದಲ್ಲಿ ಕೊಡಮಾಡುವ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರುಗಳಾದ ಪುತ್ತರೀರ ಸೀತಮ್ಮ, ಮುಳ್ಳಂಡ ಮಾಯಮ್ಮ, ಧನಂಜಯ, ಬೊಪ್ಪಟ್ಟಿರ ಅಪ್ಪುಟ ಇದ್ದರು.