ಸೋಮವಾರಪೇಟೆ, ಜೂ.೨೮: ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ವಿವಾಹಿತ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಕಾರೇಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಾರೇಕೊಪ್ಪ ಗ್ರಾಮ ನಿವಾಸಿ, ಪಟ್ಟಣದಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಕೆ.ಪಿ. ಮನು (೪೦) ಎಂಬವರೇ ಆತ್ಮಹತ್ಯೆಗೆ ಶರಣಾದವರು. ನಿನ್ನೆ ದಿನ ರಾತ್ರಿ ೧೦ ಗಂಟೆಗೆ ಕಾರೇಕೊಪ್ಪ ಗ್ರಾಮದ ಮನೆಗೆ ತೆರಳಿದ ಮನು, ನಂತರ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮನು ಅವರ ತಾಯಿ ಮುತ್ತು ಅವರು ನೀಡಿದ ದೂರಿನ ಮೇಲೆ ಪೊಲೀಸ್ ಠಾಣಾಧಿಕಾರಿ ರಮೇಶ್‌ಕುಮಾರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಮೃತ ಮನು, ಪತ್ನಿ ಹಾಗೂ ೮ ವರ್ಷದ ಪುತ್ರನನ್ನು ಅಗಲಿದ್ದಾರೆ.