ಮಡಿಕೇರಿ, ಜೂ. ೨೯: ಕೇಂದ್ರ ಸರಕಾರ ದೇಶದ ಅಭಿವೃದ್ಧಿಗಾಗಿ ಜಾರಿ ಮಾಡಿರುವ ಯೋಜನೆಗಳನ್ನು ಕಾರ್ಯಕರ್ತರು ಮನೆಮನೆಗೆ ತಲುಪಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಕರೆ ನೀಡಿದರು.

ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿದ್ದ ಕೇಂದ್ರ ಸರಕಾರ ಹತ್ತುಹಲವು ಜನಪರ ಯೋಜನೆ ರೂಪಿಸಿತ್ತು. ಅದಾದ ನಂತರದ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತು. ಇದಕ್ಕೆ ನಮ್ಮ ಕಾರ್ಯಕ್ರಮ ಜನರಿಗೆ ತಿಳಿಸದಿರುವುದು ಕಾರಣವಾಗಿತ್ತು. ಇದೀಗ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಆದರೆ, ಅವರ ಕಾರ್ಯಕ್ರಮವನ್ನು ಜನರಿಗೆ ತಿಳಿಸಬೇಕಾದ ಕರ್ತವ್ಯ ಕಾರ್ಯಕರ್ತರದ್ದಾಗಿದೆ. ದೇಶದಲ್ಲಿ ತಲೆದೋರಿದ್ದ ಗಂಭೀರ ವಿಚಾರಗಳಿಗೆ ಮೋದಿ ಸರಳ ಪರಿಹಾರ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇರುವಂತೆ ಭಾಸವಾಗುತ್ತಿದೆ. ಡಿ.ಕೆ. ಶಿವಕುಮಾರ್ ಎಲ್ಲಾ ಸಭೆಗಳ ಹಿಡಿತ ಸಾಧಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಬಿಜೆಪಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ. ಲೋಕಸಭೆಯಲ್ಲಿ ಗೆಲುವಿನ ನಂತರ ರಾಜ್ಯದಲ್ಲಿ ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ನಮಗೆ ಸೋಲು ಹೊಸದಲ್ಲ. ಕೊಡಗಿನಲ್ಲಿ ಇಂದಿಗೂ ಬಿಜೆಪಿಗೆ ಹಿಡಿತವಿದೆ. ಸೋಲಿನ ವಿಮರ್ಶೆ ಕಾರ್ಯಕರ್ತರು ಮಾಡಿ ದ್ದಾರೆ. ವಿಮರ್ಶೆಗೆ ಪೂರ್ಣವಿರಾಮ ಹಾಕಿ.

(ಮೊದಲ ಪುಟದಿಂದ) ಪಕ್ಷದ ಬೆಳವಣಿಗೆಯನ್ನು ಯೋಚಿಸಬೇಕು. ಮುಂದಿನ ಚುನಾವಣೆಯಲ್ಲಿ ಗೆದ್ದು ನಾವು ಸೇಡು ತೀರಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಕ್ಕಿ ಕೇಂದ್ರದ್ದು, ಚೀಲ ಸಿದ್ದರಾಮಯ್ಯರದ್ದು

ಇದೀಗ ರಾಜ್ಯದ ಜನರಿಗೆ ನೀಡುವ ೫ ಕೆಜಿ ಅಕ್ಕಿ ಕೇಂದ್ರ ಸರಕಾರದ್ದು, ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು ಎಂಬ ವಿಚಾರ ಬಯಲಾಗಿದೆ. ಅಕ್ಕಿ ನೀಡಲಾಗದಿದ್ದಲ್ಲಿ ಜನರ ಖಾತೆಗೆ ಹಣ ಹಾಕುವಂತೆ ಬಿಜೆಪಿ ಸಲಹೆ ನೀಡಿತ್ತು. ಅಂದು ಕಾಂಗ್ರೆಸಿಗರು ‘ಹಣವನ್ನು ತಿನ್ನೋಕ್ಕಾಗುತ್ತ’ ಎಂದು ಬಿಜೆಪಿಯನ್ನು ಅಣಕಿಸಿತ್ತು. ಇದೀಗ ಏನು ಆಗಿದೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದರು.

ಚುನಾವಣಾ ಪೂರ್ವ ನೀಡಿದ್ದ ‘ಗ್ಯಾರೆಂಟಿ’ಗಳು ಯಾವುದು ಈಡೇರಿಲ್ಲ. ‘ಸರ್ವರ್ ಹ್ಯಾಕ್’ ಆಗಿದೆ ಎಂದು ಕೇಂದ್ರದ ಮೇಲೆ ಗೂಬೆಕೂರಿಸುವ ಪ್ರಯತ್ನ ಕಾಂಗ್ರೆಸ್ ಮಾಡಿದೆ. ಗ್ಯಾರೆಂಟಿ ಅನುಷ್ಠಾನ ವಿಳಂಬದಿAದ ಸಾವಿರಾರು ಕೋಟಿ ಹಣವನ್ನು ಕಾಂಗ್ರೆಸ್ ಉಳಿಸಿದೆ. ಭ್ರಷ್ಟಾಚಾರ ಮಾಡುವುದು ಕಾಂಗ್ರೆಸ್ ನಾಯಕರ ಡಿ.ಎನ್.ಎ. ಅಲ್ಲಿಯೇ ಇದೆ. ಮೋದಿ ಸೋಲಿಸೋದು ಬಿಟ್ಟರೆ ವಿಪಕ್ಷಗಳಿಗೆ ಏನು ಗೊತ್ತಿಲ್ಲ. ೫ ಗ್ಯಾರೆಂಟಿಗಳ ಆಯಸ್ಸು ಲೋಕಸಭಾ ಚುನಾವಣೆ ತನಕ ಮಾತ್ರ. ಸಿದ್ದರಾಮಯ್ಯ ಸರಕಾರದ ಮೋಸ ಜನರಿಗೆ ನಾವು ಮುಟ್ಟಿಸಬೇಕು. ಕೊಡಗಿನ ರೈತರ ಮೇಲೆ ಒತ್ತುವರಿ ಆರೋಪ ಹೊರಿಸಿ ಸುಮ್ಮನೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಿದ್ದರು. ಇದರ ನಿಯಮ ಬದಲಾಯಿಸಿ ನೈಜ ರೈತರ ಹಿತ ಕಾಪಾಡಿದ್ದೇವೆ. ಇದು ಜನರಿಗೆ ತಿಳಿದೇ ಇಲ್ಲ. ಕೊಡಗಿನಲ್ಲಿ ಹೊಸ ತಾಲೂಕು ರಚಿಸಿದ್ದೇವೆ. ಜನರಿಗೆ ನಮ್ಮ ಕೆಲಸ ತಲುಪಿಸುವಲ್ಲಿ ವಿಫಲತೆ ಅನುಭವಿಸಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಈ ತಪ್ಪು ಮರುಕಳಿಸಬಾರದು ಎಂದು ಒತ್ತಿ ಹೇಳಿದ ಆರ್. ಅಶೋಕ್, ೪೦% ಸರಕಾರ ಎಂದು ಬಿಜೆಪಿಯನ್ನು ಹೇಳಿತ್ತಿದ್ದ ಕಾಂಗ್ರೆಸ್ ಅದಕ್ಕೆ ದಾಖಲಾತಿ ನೀಡಿಲ್ಲ. ಇದೀಗ ಕಾಂಗ್ರೆಸ್ ವರ್ಗಾವಣೆ ದಂಧೆ ಮಾಡುತ್ತಿದೆ. ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಹಣ ನೀಡಬೇಕು. ಈ ಉದ್ದೇಶದಿಂದ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ. ಕಾಮಗಾರಿ ಸ್ಥಗಿತಗೊಳಿಸಿ ಹಣ ಮಾಡಲು ಹೊರಟಿದೆ ಇವೆಲ್ಲವನ್ನು ಜನರಿಗೆ ತಿಳಿಸಬೇಕು. ಬೀದಿಗಿಳಿದು ಹೋರಾಟ ಮಾಡಬೇಕು. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಬೇಕು. ಈ ಸರಕಾರ ಬಹಳ ದಿನ ಉಳಿಯಲ್ಲ. ಎಲ್ಲದಕ್ಕೂ ‘ಪರ್ಸಂಟೇಜ್’ ನಿಗದಿ ಮಾಡಿದ್ದಾರೆ. ಅವರ ಬಣ್ಣ ಬಯಲಾಗಲಿದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಶಾಸಕರುಗಳಿಂದ ಕೊಡಗಿನ ಅಭಿವೃದ್ಧಿ - ಪ್ರತಾಪ್ ಸಿಂಹ

ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ೯ ವರ್ಷಗಳಲ್ಲಿ ದೇಶ ಬದಲಾವಣೆ ಪಥದಲ್ಲಿರುವುದು ಜನರಿಗೆ ತಿಳಿಸಬೇಕು. ಮೋದಿ ಅವರ ಒಂದೊAದು ಯೋಜನೆಯನ್ನು ಪರಿಣಾಮಕಾರಿಯಾಗಿ ಮುಟ್ಟಿಸ ಲಾಗುತ್ತಿದೆ. ಇದರಿಂದ ಒಳ್ಳೆ ಅಭಿಪ್ರಾಯ ಸೃಷ್ಟಿಯಾಗುತ್ತಿದೆ. ಕೊಡಗು ಬಿಜೆಪಿ ಭದ್ರಕೋಟೆಯಾಗಿತ್ತು. ಸೋಲು ಆತ್ಮಸ್ಥೆöÊರ್ಯವನ್ನು ಕುಗ್ಗಿಸಿತು. ಇಂದು ರಾಜ್ಯದಲ್ಲಿನ ಸೋಲಿನ ಫಲಿತಾಂಶದಿAದ ಹೊರಬರುತ್ತಿದ್ದೇವೆ. ಕೊಡಗಿನ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಯ ಮಾಜಿ ಶಾಸಕರುಗಳು ಶ್ರಮಿಸಿದ್ದಾರೆ ಎಂದರು.

ರೂ. ೩೫೦ ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿದೆ. ಕೊಡಗು ವಿಶ್ವವಿದ್ಯಾನಿಲಯ, ಪಾಲಿಟೆಕ್ನಿಕ್, ಇಂಜಿನಿಯರಿAಗ್ ಕಾಲೇಜು ತಂದಿದ್ದಾರೆ. ಕೊಡಗು ದಸರಾ, ಹಾಕಿ ನಮ್ಮೆಗೆ ಅನುದಾನ, ಅರೆಭಾಷೆ ಅಕಾಡೆಮಿ, ಕೊಡವ ಕಲ್ಚರಲ್ ಕ್ಲಬ್, ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ಜಮ್ಮಾ ಬಾಣೆ ಹೋರಾಟ ಮಾಡಿ ಹಕ್ಕು ನೀಡುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ. ಎಲ್ಲಾ ರೀತಿಯ ಕೆಲಸ ಮಾಡಿದ್ದಾರೆ. ನೆರೆ, ಕೋವಿಡ್ ಅಂತಹ ಪ್ರತಿಕೂಲ ಪರಿಸ್ಥಿತಿಯಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಯಿತು ಆದರೆ, ನಿರೀಕ್ಷೆ ಮೀರಿ ರಂಜನ್, ಬೋಪಯ್ಯ ಅವರು ಕೆಲಸ ಮಾಡಿದ್ದಾರೆ. ನೂತನ ಶಾಸಕರಿಗೆ ಅಭಿವೃದ್ಧಿ ಕಾರ್ಯ ನಡೆಸಲು ಅವಕಾಶ ಇಲ್ಲದಂತೆ ಜಿಲ್ಲೆಯ ಅಭಿವೃದ್ಧಿ ಈ ಹಿಂದಿನ ಶಾಸಕರುಗಳು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಸೋಲಿನ ಪರಾಮರ್ಶೆ ಮಾಡಿ ತಪ್ಪು ಮರುಕಳಿಸದೆ ಲೋಕಸಭೆಯಲ್ಲಿ ಗೆಲುವು ದಾಖಲಿಸಬೇಕು. ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಗೆ ಕೊಡಗಿನ ಕ್ರೆöÊಸ್ತರು ಹೋರಾಟಕ್ಕಿಳಿದಿದ್ದಾರೆ. ೨೦೨೪ರ ಚುನಾವಣೆ ದೇಶದ ಚುನಾವಣೆ. ದೇಶದ ಭವಿಷ್ಯ ಮೋದಿ ರಾಜಕೀಯ ಭವಿಷ್ಯದಲ್ಲಿ ಅಡಗಿದೆ. ಬೇರೆ ದೇಶ ನಮ್ಮ ಸಹಕಾರ ಕೋರುತ್ತಿರುವುದು ಮೋದಿ ನಾಯಕತ್ವ ಅನಾವರಣ ಮಾಡುತ್ತಿದೆ. ರಾಜ್ಯಗಳಿಗೆ ಅಕ್ಕಿ ನೀಡಿದ್ದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ. ಇದಕ್ಕೆ ಸಿದ್ದರಾಮಯ್ಯ ಅನ್ನಭಾಗ್ಯ ‘ಲೇಬಲ್’ ಅಂಟಿಸಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಇದು ದೋಖಾ ಸರಕಾರ. ನಾವು ಸೋತಿದ್ದೇವೆ ಸತ್ತಿಲ್ಲ. ಆತ್ಮಾವಲೋಕನ ಮಾಡಿಕೊಂಡು ಮುಂದೆ ಗೆಲುವಿಗೆ ಮರಳಬೇಕು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಕರೆ ನೀಡಿದರು.

ಆತ್ಮಾವಲೋಕನ ಮಾಡಿಕೊಳ್ಳಬೇಕು - ರಂಜನ್

ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆಯ ವೇಳೆ ಕೇಂದ್ರದ ಸಾಧನೆ ಮನೆಮನೆಗೆ ಮುಟ್ಟಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ತಂಡವಾಗಿ ಬಿಜೆಪಿ ನಾಯಕರು ಪ್ರವಾಸ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಜನಪ್ರತಿನಿಧಿಗಳಿದ್ದರು. ಕೊಡಗು ಕಾಂಗ್ರೆಸ್ ಮುಕ್ತವಾಗಿತ್ತು. ಇದೀಗ ಪರಿಸ್ಥಿತಿ ಬದಲಾಗಿ ಸೋಲು ಕಂಡಿದ್ದೇವೆ. ಆದರೆ ಮತದಾನ ಶೇಕಡ ಹೆಚ್ಚಿದೆ. 'ಗ್ಯಾರೆಂಟಿ' ಗಳ ಪ್ರಭಾವದ ಪರಿಣಾಮದಿಂದ ಸೋಲು ಅನುಭವಿಸಿದ್ದೇವೆ. ಈ ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಜನರ ಮನಸ್ಸಿನಲ್ಲಿ ಇನ್ನೂ ಪಕ್ಷ ಸ್ಥಾನ ಪಡೆದಿದೆ. ನೇರ ಹಣಾಹಣಿಯೂ ಸೋಲಿಗೆ ಒಂದು ಕಾರಣ. ಜೆಡಿಎಸ್, ಎಸ್.ಡಿ.ಪಿ.ಐ. ಕೊನೆಕ್ಷಣದಲ್ಲಿ ಕಾಂಗ್ರೆಸ್ ಬೆಂಬಲಿಸಿದ ಹಿನ್ನೆಲೆ ಸೋಲು ಕಂಡಿದ್ದೇವೆ ಎಂದು ಹೇಳಿದರು.

ರಾಷ್ಟಿçÃಯತೆ ಚಿಂತನೆ ದೇಶ ಉಳಿಸುವ ನಿಟ್ಟಿನಲ್ಲಿ ಮೋದಿ ಸಾಧನೆ ಮನೆಮನೆಗೆ ಮುಟ್ಟಿಸಬೇಕು. ವಿಶ್ವದ ಅಗ್ರಗಣ್ಯ ನಾಯಕರಾಗಿ ಮೋದಿ ಹೊರಹೊಮ್ಮಿದ್ದಾರೆ. ಕಾಂಗ್ರೆಸ್ ಯೋಜನೆಗಳು ಸಮರ್ಪಕವಾಗಿ ತಲುಪುವುದಿಲ್ಲ. ಕೇಂದ್ರದ ೫ ಕೆ.ಜಿ. ಅಕ್ಕಿ ರಾಜ್ಯ ಸರಕಾರ ನೀಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಇದೀಗ ಸತ್ಯ ಬಹಿರಂಗವಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದ ಅವರು, ಕಳೆದ ಚುನಾವಣೆಯಲ್ಲಿ ಆತ್ಮವಂಚನೆ ಮಾಡಿಕೊಂಡವರು ಆತ್ಮಾವಲೋಕನ ಮಾಡಿ ಕೊಳ್ಳಬೇಕೆಂದರು.

ಮೋದಿ ಪ್ರಶ್ನಾತೀತ ನಾಯಕ - ಕೆ.ಜಿ. ಬೋಪಯ್ಯ

ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರೈತರಿಗಾಗಿ ಬಿಜೆಪಿ ಸರಕಾರ ಅಪಾರ ಕೊಡುಗೆ ನೀಡಿದೆ. ಕಾಶ್ಮೀರದಲ್ಲಿದ್ದ ವಿಶೇಷಾಧಿಕಾರ ತೆಗೆದು ಸ್ವಾತಂತ್ರö್ಯ ಮಾಡಿದೆ. ಇದು ಇಡೀ ದೇಶಕ್ಕೆ ನೆಮ್ಮದಿ ನೀಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಜನರ ಭಾವನೆಗೆ ನ್ಯಾಯ ಕೊಡಿಸಿ ಹಲವರ ಕನಸನ್ನು ನನಸು ಮಾಡಿದ ಕೀರ್ತಿ ಮೋದಿ ಸರಕಾರದ ಸಣ್ಣ ಸಾಧನೆಯಲ್ಲ. ಮೋದಿ ಜಾಗತಿಕ ಮಟ್ಟದಲ್ಲಿ ಪ್ರಶ್ನಾತೀತ ನಾಯಕ. ಕಳೆದ ಬಾರಿ ರೂ. ೧೩೪ ಕೋಟಿ ಕೊಡಗಿನ ಕಾಫಿ ಬೆಳೆಗಾರರಿಗೆ ಪರಿಹಾರ ನೀಡಲಾಗಿದೆ. ಡಿಜಿಟಲ್ ಅಡಿ ಬದಲು ನೇರವಾಗಿ ಅವರ ಕೈಗೆ ಹಣ ನೀಡಿದ್ದರೆ ನಮ್ಮ ಗೆಲುವು ಸುಲಭವಾಗುತಿತ್ತು. ನಮ್ಮ ಕೆಲಸ ಜನ ಮರೆತಿದ್ದಾರೆ. ವಿದ್ಯುತ್ ವಂಚಿತ ಗ್ರಾಮಗಳಿಗೆ ವಿದ್ಯುತ್ ನೀಡಿದ್ದೇವೆ. ಸಾಕಷ್ಟು ಸವಾಲುಗಳಿವೆ. ವೈಯಕ್ತಿಕ ಕಾರಣ ಮುಂದಿಟ್ಟು ಪಕ್ಷಕ್ಕೆ ದ್ರೋಹ ಮಾಡಬೇಡಿ. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಈ ಕ್ಷೇತ್ರವನ್ನೂ ಉಳಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್, ವಿಧಾನ ಪರಿಷತ್ತು ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾ ಬಿಜೆಪಿ, ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ, ಕುಂಞAಡ ಅರುಣ್ ಭೀಮಯ್ಯ, ಮಾದಪ್ಪ, ವಿಧಾನ ಪರಿಷತ್ತು ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್, ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಸೋಮವಾರಪೇಟೆ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಮಡಿಕೇರಿ ನಗರ ಅಧ್ಯಕ್ಷ ಮನು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.