ಗೋಣಿಕೊಪ್ಪಲು, ಜೂ. ೨೭: ಕಂದಮ್ಮಳಿಬ್ಬರ ಚಿಕಿತ್ಸೆಗೆ ನಾಡಿನ ಜನತೆ ಸ್ಪಂದಿಸಿದ್ದು ಇವರ ಚಿಕಿತ್ಸೆ ವೆಚ್ಚವನ್ನು ತುಂಬಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನೊಂದ ಕಂದಮ್ಮಗಳಿಗೆ ಚಿಕಿತ್ಸೆ ಹಣ ಹೊಂದಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ ‘ಸೇವ್ ದಿ ಡ್ರೀಮ್ಸ್’ ಸಂಸ್ಥೆಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ‘ಶಕ್ತಿ’ ಪ್ರಕಟಿಸಿದ ವರದಿಗೆ ಕೊಡಗಿನ ಸಹೃದಯಿ ದಾನಿಗಳು ಮಕ್ಕಳ ಪೋಷಕರ ಖಾತೆಗೆ ಹಣವನ್ನು ಜಮಾ ಮಾಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ‘ಸೇವ್ ದಿ ಡ್ರೀಮ್ಸ್’ ಸಂಸ್ಥೆಯು ಮೂರು ದಿನದಲ್ಲಿ ೬೦ ಲಕ್ಷಕ್ಕೂ ಅಧಿಕ ಹಣವನ್ನು ಈ ನೊಂದ ಕುಟುಂಬದ ಕಂದಮ್ಮಗಳ ಚಿಕಿತ್ಸೆಗೆ ಸಂಗ್ರಹಿಸುವ ಮೂಲಕ ಮಕ್ಕಳಿಬ್ಬರ ಬದುಕಿಗೆ ಆಸರೆಯಾಗಿದ್ದಾರೆ.
ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಹಾಗೂ ಮಂಗಳೂರಿನ ಆಸ್ಪತ್ರೆಯಲ್ಲಿ ಮಕ್ಕಳಿಬ್ಬರು ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈಗಾಗಲೇ ಇದಕ್ಕೆ ಬೇಕಾದ ಪೂರ್ವ ತಯಾರಿಗಳು ನಡೆಯುತ್ತಿದೆ. ಮಕ್ಕಳಿಬ್ಬರ ಆರೋಗ್ಯದ ಬಗ್ಗೆ ಚಿಕಿತ್ಸೆಗಾಗಿ ಹಣದ ಸಮಸ್ಯೆ ಎದುರಿಸುತ್ತಿದ್ದ ಸಂದರ್ಭ ‘ಶಕ್ತಿ’ಯು ವರದಿ ಪ್ರಕಟಿಸಿತ್ತು. ವರದಿಯ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಬ್ಯಾಂಕ್ ಮೂಲಕ ಹಾಗೂ ಗೂಗಲ್ ಪೇ ಮೂಲಕ ಹಣ ಸಂದಾಯ ಮಾಡಿದ್ದಾರೆ. ಸಂಘ ಸಂಸ್ಥೆಗಳು ಖುದ್ದಾಗಿ ಮನೆಗೆ ತೆರಳಿ ತಮ್ಮ ಕೈಲಾದ ಸಹಾಯ ಹಸ್ತ ನೀಡುವ ಮೂಲಕ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಮಕ್ಕಳಿಬ್ಬರು ಖಾಯಿಲೆಯಿಂದ ಬಳಲುತ್ತಿದ್ದ ಸಂದರ್ಭ ಪ್ರತಿನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದ ಹೆತ್ತವರ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಆದಿಲ್ ಅಹಮ್ಮದ್ ತನ್ನ ಪತ್ನಿ ಮುನ್ಸಿರಾ, ಮಗಳು ಆಲಿಯಾ ಫಾತಿಮ, ಮಗ ಸೈಯದ್ ಆಹಿಲ್ನ ಮುಖದಲ್ಲಿ ಹರ್ಷ ಮೂಡಿದೆ. ಯಾವುದೇ ಜಾತಿ ಧರ್ಮ, ಬೇಧ ಭಾವ ತೋರದೆ ಈ ನಾಡಿನ ಜನತೆ ಮಕ್ಕಳಿಬ್ಬರ ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಭರಿಸಿದ್ದಾರೆ.
ಬೆಂಗಳೂರಿನ ಆಸ್ಪತ್ರೆಯಲ್ಲಿ ಆಟೋಚಾಲಕ ಆದಿಲ್ ಅಹಮ್ಮದ್ ತನ್ನ ಮಗನಾದ ೬ ವರ್ಷ ಪ್ರಾಯದ ಸೈಯದ್ ಆಹಿಲ್ನೊಂದಿಗೆ ತಾನೂ ಕೂಡ
(ಮೊದಲ ಪುಟದಿಂದ) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಬೇಕಾಗಿದೆ. ತಲಸೀಮಿಯ ಮೇಜರ್ ಎಂಬ ಕ್ಯಾನ್ಸರ್ ಮಾದರಿಯ ಖಾಯಿಲೆಯು ಮಗನಿಗೆ ಕಾಣಿಸಿಕೊಂಡಿರುವುದರಿAದ ಮಗುವಿನ ಆರೋಗ್ಯದ ದೃಷ್ಟಿಯಿಂದ ಸ್ವತಃ ತಂದೆಯೇ ಮಗನಿಗೆ ‘ಬೋನ್ಮ್ಯಾರೊ’ (ಅಸ್ತಿಮಜ್ಜೆ) ಕಸಿ ಶಸ್ತç ಚಿಕಿತ್ಸೆಗೆ ತನ್ನ ಅಂಗಾAಗವನ್ನು ನೀಡುವ ಮೂಲಕ ಚಿಕಿತ್ಸೆಗೆ ಮುಂದಾಗಲಿದ್ದಾರೆ. ತಂದೆ ಆದಿಲ್ ಅಹಮ್ಮದ್ ಮಗ ಸೈಯದ್ ಆಹಿಲ್ ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ.
ಇತ್ತ ಆದಿಲ್ ಅಹಮ್ಮದ್ ಮಗಳಾದ ಆಲಿಯಾ ಫಾತಿಮಳಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಬೆಂದು ಹೋದ ಶರೀರದ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಯು ನಡೆಯಲಿದೆ. ಸಾಮಾಜಿಕ ಜಾಲತಾಣದ ಮೂಲಕ ಮಕ್ಕಳಿಬ್ಬರ ಆರೋಗ್ಯದ ಬಗ್ಗೆ ಬೆಳಕು ಚೆಲ್ಲಿದ್ದ ‘ಸೇವ್ ದಿ ಡ್ರೀಮ್ಸ್’ ಸಂಸ್ಥೆಯ ಪದಾಧಿಕಾರಿಗಳು ಮೂರು ದಿನದಲ್ಲಿ ಚಿಕಿತ್ಸೆಗೆ ಬೇಕಾದ ೬೦ ಲಕ್ಷಕ್ಕೂ ಅಧಿಕ ಹಣವನ್ನು ಕುಟುಂಬದ ಬ್ಯಾಂಕ್ ಖಾತೆಗೆ ನಾಡಿನ ಜನರ ಕೈಯಿಂದ ಜಮಾ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವಾರಗಳ ಕಾಲ ನೊಂದ ಕುಟುಂಬದೊAದಿಗೆ ಕೈ ಜೋಡಿಸಿ ಮಾನವೀಯತೆಯನ್ನು ಮೆರೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಮೂಲ್ಯ ಎರಡು ಜೀವಗಳನ್ನು ರಕ್ಷಿಸಲು ಈ ನಾಡಿನ ಜನತೆ ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ‘ಶಕ್ತಿ’ ಪ್ರಕಟಿಸಿದ ವರದಿಗೂ ಜನತೆ ಮನ್ನಣೆ ನೀಡಿದ್ದಾರೆ.
(ಹೆಚ್.ಕೆ.ಜಗದೀಶ್)