ಮಡಿಕೇರಿ, ಜೂ. ೨೭: ಜಿಲ್ಲೆಯಲ್ಲಿ ಅಭಿವೃದ್ಧಿಯಿಂದ ಹಿಂದುಳಿದ ಹಾಡಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಹಾಗೂ ವನ್ಯಜೀವಿ ಹಾವಳಿ ತಡೆಗೆ ವೈಜ್ಞಾನಿಕ ಯೋಜನೆ ರೂಪಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗುವ ನಿಟ್ಟಿನಲ್ಲಿ ಸರಕಾರದೊಂದಿಗೆ ಅಧಿಕಾರಿಗಳು ಕೈಜೋಡಿಸಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎನ್.ಎಸ್. ಬೋಸರಾಜು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳು ನಡೆದವು.
ಹಾಡಿಗಳಿಗೆ ವಿದ್ಯುತ್ ಒದಗಿಸಲು ಅರಣ್ಯ ಇಲಾಖೆ ಅಡ್ಡಿ ಮಾಡುತ್ತಿರುವ ಬಗ್ಗೆ ಸಚಿವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಐಟಿಡಿಪಿ ಅಧಿಕಾರಿ ಜಿಲ್ಲೆಯಲ್ಲಿ ೨೫೦ ಹಾಡಿಗಳಿವೆ. ೫೮ ಸಾವಿರದಷ್ಟು ಬುಡಕಟ್ಟು ಮಂದಿ ವಾಸಿಸುತ್ತಿದ್ದಾರೆ. ಈ ಪೈಕಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಡಿ ಒಟ್ಟು ೧೮೩೩, ೪೦೮೪೦೮ ಓಟಿಎಫ್‌ಡಿ ಹಕ್ಕು ಪತ್ರ ಹಾಗೂ ೪೫ ಸಮುದಾಯ ಸಂಪನ್ಮೂಲ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ನಾಗರಹೊಳೆ ಸೇರಿದಂತೆ ಕೆಲವೊಂದು ಅರಣ್ಯ ಸೂಕ್ಷö್ಮ ಪ್ರದೇಶಗಳಲ್ಲಿ ಮೂಲಸೌಲಭ್ಯದ ಕೆಲಸಗಳಿಗೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದರು.
ಚೆಸ್ಕಾಂ ಅಧಿಕಾರಿ ಮಾತನಾಡಿ, ೭ ಹಾಡಿಗಳಿಗೆ ವಿದ್ಯುತ್ ಪೂರೈಸಲು ಪ್ರಸ್ತಾವನೆ ಇದೆ. ಐಟಿಡಿಪಿ ಮೂಲಕ ಪ್ರಕ್ರಿಯೆ ಆರಂಭಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ವನ್ಯಜೀವಿ ವಿಭಾಗದ ಅಧಿಕಾರಿ ಶಿವರಾಮ್ ಮಾತನಾಡಿ, ಹಾಡಿಗಳ ಅಭಿವೃದ್ಧಿಗೆ ಸಂಬAಧಪಟ್ಟAತೆ ಕೆಲವೊಂದು ನಿರ್ಬಂಧಗಳಿವೆ. ಅರಣ್ಯ ವ್ಯಾಪ್ತಿಯಲ್ಲಿ ಹಾಡಿಗಳಿರುವುದರಿಂದ ಕಾನೂನಿನ ಪ್ರಕಾರ ಅಭಿವೃದ್ಧಿ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಮುಂದಾಗ ಲಾಗುವುದು ಎಂದು ಹೇಳಿದರು.
ಸಚಿವ ಬೋಸರಾಜು ಮಾತನಾಡಿ, ಹಾಡಿ ನಿವಾಸಿಗಳು ಶಿಕ್ಷಣ, ರಸ್ತೆ, ನೀರು, ವಿದ್ಯುತ್ ಅಂತಹ ಮೂಲಭೂತ ವಿಚಾರಗಳ ಬೇಡಿಕೆ ಮುಂದಿಡುತ್ತಿದ್ದಾರೆ. ಅದನ್ನು ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ಅಧಿಕಾರಿಗಳು ಮಾನವೀಯತೆಯಡಿ ಯಲ್ಲಿಯೂ ಕಾರ್ಯನಿರ್ವಹಿಸ ಬೇಕೆಂದು ಸಲಹೆ ನೀಡಿದರು.
ವನ್ಯಜೀವಿ ಹಾವಳಿ ತಡೆಗೆ ಮುಂದಾಗಿ
ವನ್ಯಜೀವಿ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದ ಸಚಿವರು ಇದರ ಪರಿಹಾರದ ಬಗ್ಗೆ ವೈಜ್ಞಾನಿಕ ವರದಿಯ ಅಗತ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿಕೇರಿ ಡಿಎಫ್‌ಓ ಎ.ಟಿ. ಪೂವಯ್ಯ ಮಾತನಾಡಿ, ಟಾಸ್ಕ್ಫೋರ್ಸ್ ಮೂಲಕ ಆನೆ ದಾಳಿ ನಿಯಂತ್ರಣಕ್ಕೆ ಮುಂದಾಗಲಾಗಿದೆ. ಕಾರ್ಯಾಚರಣೆ ಮೂಲಕ ನಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಲಾಗುತ್ತಿದೆ. ಆದರೆ, ತೋಟಗಳಲ್ಲಿ ಬೆಳೆಗಳ ರುಚಿ ನೋಡಿರುವ ಕಾಡಾನೆ ಹಿಂಡು ಕಾಡಿಗಟ್ಟಿದ ಮರುದಿನ ಮತ್ತೆ ತೋಟಗಳಿಗೆ ಪ್ರವೇಶಿಸುತ್ತಿವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಸಮರ್ಪಕವಾದ ಬ್ಯಾರಿಕೇಡ್
(ಮೊದಲ ಪುಟದಿಂದ) ಅಳವಡಿಸದ ಹಿನ್ನೆಲೆ ವನ್ಯಜೀವಿಗಳು ನಾಡಿಗೆ ದಾಂಗುಡಿ ಇಡುತ್ತಿವೆ. ರಾಜ್ಯ ಸರಕಾರ ಹೆಚ್ಚಿನ ಅನುದಾನವನ್ನು ಜಿಲ್ಲೆಗೆ ನೀಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆAದು ಆಗ್ರಹಿಸಿದರು.
ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ವನ್ಯಜೀವಿಗಳಿಂದ ಸಂಭವಿಸುತ್ತಿರುವ ಬೆಳೆ ಹಾಗೂ ಜಾನುವಾರು ಹಾನಿಗೆ ತ್ವರಿತವಾಗಿ ಪರಿಹಾರ ನೀಡಬೇಕೆಂದರು. ದಾಳಿಯಿಂದ ಮಾನವ ಗಾಯಗೊಂಡಲ್ಲಿ ಅಥವಾ ಸಾವನ್ನಪ್ಪಿದ್ದಲ್ಲಿ ಕುಟುಂಬದ ನೆರವಿಗೆ ಧಾವಿಸಬೇಕು. ವನ್ಯಜೀವಿ ದಾಳಿ ತಡೆಗೆ ವಿಶೇಷ ಪ್ರಯತ್ನದ ಅಗತ್ಯತೆ ಇದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಕಳೆದ ೨ ದಶಕಗಳಿಂದ ಜಿಲ್ಲೆ ವನ್ಯಜೀವಿ ಹಾವಳಿಯಿಂದ ತತ್ತರಿಸಿ ಹೋಗಿದೆ. ಕಾಡಿನಲ್ಲಿ ಆಹಾರ, ನೀರು ಇಲ್ಲದಿರುವುದು. ಆನೆ ಕಾರಿಡರ್ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಇದಕ್ಕೆ ಮೂಲ ಕಾರಣ ಎಂದು ಗಮನ ಸೆಳೆದರು.
ಡಿಎಫ್‌ಓ ಪೂವಯ್ಯ ಪ್ರತಿಕ್ರಿಯಿಸಿ, ನಾಗರಹೊಳೆ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ಪೂರ್ಣವಾಗಿ ಅಳವಡಿಸಿದರೆ ಆನೆ ಪ್ರವೇಶ ತಡೆಯಬಹುದಾಗಿದೆ. ಹಾಸನದ ನೇತ್ರಾವತಿ ನದಿಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿದ ಪರಿಣಾಮ ಸೋಮವಾರಪೇಟೆ ಭಾಗಕ್ಕೆ ಹೆಚ್ಚಿನ ಆನೆಗಳು ಬರುತ್ತಿವೆ. ಕಾಡಿನಲ್ಲಿ ೫ ವರ್ಷಗಳಿಗೊಮ್ಮೆ ಬಿದಿರು ಸತ್ವ ಕಳೆದುಕೊಳ್ಳುತ್ತದೆ. ಈ ಹಿನ್ನೆಲೆ ೫೦ ರಿಂದ ೬೦ ಸಾವಿರ ಬಿದಿರು ನೆಡಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.
ಭಾಗಮಂಡಲ ಮೇಲ್ಸೇತುವೆ ಶೀಘ್ರ ಮುಗಿಸಿ
ಭಾಗಮಂಡಲದಲ್ಲಿ ಪ್ರವಾಹ ಸಂದರ್ಭ ಸಂಚಾರಕ್ಕೆ ಸಮಸ್ಯೆಯಾಗದಿರಲಿ ಎಂಬ ಉದ್ದೇಶದಿಂದ ನಿರ್ಮಿಸಿದ ಮೇಲ್ಸೇತುವೆ ಪೂರ್ಣಗೊಳ್ಳದ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಮಳೆಗಾಲದಲ್ಲಿ ಕಾಲ್ನಡಿಗೆಯಲ್ಲಿ ಸಾರ್ವಜನಿಕರು ತೆರಳಲಾದರು ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮೇಲ್ಸೇತುವೆಗೆ ತಾತ್ಕಾಲಿಕವಾಗಿ ೩ ಸಂಪರ್ಕ ರಸ್ತೆ ಮಾಡಿ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ನೀಡಬೇಕು. ಈ ವರ್ಷ ಮಳೆ ಬಂದಾಗ ಯಾರು ಬೋಟ್‌ನಲ್ಲಿ ಹೋಗುವ ಪರಿಸ್ಥಿತಿ ತಲೆದೋರಬಾರದು. ಒಳ್ಳೆಯ ಉದ್ದೇಶಕ್ಕೆ ನಿರ್ಮಿಸಿದ ಸೇತುವೆ ಯಾವುದೇ ಕಾರಣಕ್ಕೆ ಹಾಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ ಅವರು, ಅದೇ ರೀತಿ ನಾಮಕಾವಸ್ಥೆಗೆ ಕೇವಲ ಮಣ್ಣು ಹಾಕಿ ಸಂಪರ್ಕ ರಸ್ತೆ ಮಾಡದೆ ದೀರ್ಘ ಕಾಲ ಉಪಯೋಗಕ್ಕೆ ಬರುವಂತ ರಸ್ತೆ ನಿರ್ಮಿಸಬೇಕೆಂದು ತಾಕೀತು ಮಾಡಿದರು.
ಇದಕ್ಕೆ ಉತ್ತರಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳು, ಸಂಪರ್ಕ ರಸ್ತೆಗೆ ಟೆಂಡರ್ ಆಹ್ವಾನಿಸಲಾಗಿದೆ. ವಾರದೊಳಗೆ ಕೆಲಸ ಆರಂಭಿಸಿ ಒಂದು ತಿಂಗಳಿನೊಳಗೆ ಮುಗಿಸುತ್ತೇವೆ ಎಂದು ಭರವಸೆ ನೀಡಿದರು.
ಬಾಂಡ್ ಗಣಪತಿ ಮಧ್ಯ ಪ್ರವೇಶಿಸಿ, ಮಳೆಗಾಲದಲ್ಲಿ ಈ ಕೆಲಸ ಮಾಡುವುದು ಕಷ್ಟ ಸಾಧ್ಯ. ವಾಸ್ತವ ಸ್ಥಿತಿ ಅರಿತು ವೈಜ್ಞಾನಿಕವಾಗಿ ಕೆಲಸ ಮಾಡುವಂತೆ ಪ್ರಸ್ತಾಪಿಸಿದರು.
ಕುಶಾಲನಗರ ನ್ಯಾಯಾಲಯ ಕಟ್ಟಡ, ಬಾಣಾವಾರ-ಸೋಮವಾರಪೇಟೆ ರಸ್ತೆ ಕಾಮಗಾರಿ ಬಗ್ಗೆ ಶಾಸಕ ಮಂಥÀರ್‌ಗೌಡ ಅವರು ಮಾಹಿತಿ ಪಡೆದರು. ಭಾಗಮಂಡಲ-ಕರಿಕೆ ರಸ್ತೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಭಾಗಮಂಡಲ-ಕರಿಕೆ ರಸ್ತೆ ಸುಧಾರಿಸಬೇಕಿದೆ ಎಂದು ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದೇಗೌಡ ಅವರು ಭಾಗಮಂಡಲ-ಕರಿಕೆ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷವರ್ಧನ್ ಸೇರಿದಂತೆ ಇನ್ನಿತರರು ಹಾಜರಿದ್ದರು.