ಚೆಯ್ಯಂಡಾಣೆ, ಜೂ. ೨೭: ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಶಾಲಾ ಸಂಸತ್ ಚುನಾವಣೆ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎ ಹ್ಯಾರಿಸ್ ಅಣುಕು ಮತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಶಾಲಾ ಆವರಣದಲ್ಲಿ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಮತ ಕೇಂದ್ರ, ಅಧಿಕಾರಿಗಳನ್ನು ನೇಮಕಗೊಳಿಸಿ ಮಕ್ಕಳ ಸಂಸತ್ ಮತದಾನಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಾರ್ವತ್ರಿಕ ಮತದಾನ ಪ್ರಕ್ರಿಯೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.
ಇದರಲ್ಲಿ ನಾಯಕನಾಗಿ ೧೦ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಅಸ್ಕರ್ ಆಯ್ಕೆಯಾದರೆ, ಉಪನಾಯಕನಾಗಿ ೧೦ನೇ ತರಗತಿ ವಿದ್ಯಾರ್ಥಿ ಶಾಹಿಲ್ ಇಜಾಝ್ ಆಯ್ಕೆಯಾದರು. ಚುನಾವಣೆಯ ಜವಾಬ್ದಾರಿಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಶಿಕ್ಷಕ ವೃಂದದವರು ವಹಿಸಿದ್ದರು.