ಸೋಮವಾರಪೇಟೆ, ಜೂ. ೨೭: ಭಯಮುಕ್ತ ಮತ್ತು ಭೇದ ರಹಿತ ಪತ್ರಿಕೋದ್ಯಮದಿಂದ ಮಾತ್ರ ಸುಭದ್ರ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಮಾಧ್ಯಮಗಳು ಜವಾಬ್ದಾರಿ ಯುತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.

ತಾಲೂಕು ಪತ್ರಕರ್ತರ ಸಂಘದಿAದ ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧಕ ಪತ್ರಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು.

ದಾಕ್ಷಿಣ್ಯ ಹಾಗೂ ಓಲೈಕೆರಹಿತ ಪತ್ರಿಕೋದ್ಯಮ ಕೊಡಗಿನಲ್ಲಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ಮಾಧ್ಯಮ ಕ್ಷೇತ್ರ ಶ್ರಮಿಸುತ್ತಿದೆ ಎಂದ ರವೀಂದ್ರ ಅವರು, ಕೊರೊನಾ ಹಾಗೂ ಭೂಪ್ರಳಯ ಸಂದರ್ಭ ಪತ್ರಕರ್ತರ ಸೇವೆ ಸದಾ ಸ್ಮರಣೀಯ ಎಂದರು. ಸರ್ಕಾರ ಹಾಗೂ ಜನಪ್ರತಿನಿಧಿ ಗಳು ತಪ್ಪು ಮಾಡಿದಾಗ ಅವರನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಕೆಲಸ ಮಾಡಬೇಕು. ಸ್ವಾತಂತ್ರö್ಯದ ನಂತರ ದೇಶದ ಪ್ರಜಾಪ್ರಭುತ್ವದ ಆಶಯ ಗಳನ್ನು ಈಡೇರಿಸುವ ಜವಾಬ್ದಾರಿಯನ್ನು ಪತ್ರಿಕಾರಂಗ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯಿಸಿದರು.

ಪತ್ರಕರ್ತರು ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳ ಬೇಕು. ಸರ್ಕಾರ ಹಾಗೂ ಜನಪ್ರತಿನಿಧಿಗಳು ತಪ್ಪು ಮಾಡಿದ ಸಂದರ್ಭ ಎಚ್ಚರಿಸಬೇಕು. ಭ್ರಷ್ಟಾಚಾರದ ವಿರುದ್ಧವೂ ಹೋರಾಡುವಂತಹ ಪರಿಸ್ಥಿತಿಯೂ ಇದೆ. ಈ ಸಂದರ್ಭದಲ್ಲಿ ಪತ್ರಕರ್ತರು ಧೃತಿಗೆಡಬಾರದು. ಸಮಾಜ ಪತ್ರಕರ್ತರ ಪರವಾಗಿ ನಿಲ್ಲಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಸೋಮವಾರ ಪೇಟೆ ತಾಲೂಕು ಪತ್ರಕರ್ತರ ಸಂಘದ ಸದಸ್ಯರುಗಳಾದ ಮಾಲಂಬಿ ದಿನೇಶ್, ಕುಂಬೂರು ವಿಶ್ವ, ರವಿ ಹಿರಿಕರ ಅವರುಗಳನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿಜಯ್ ಹಾನಗಲ್ ವಹಿಸಿದ್ದರು. ಖಜಾಂಚಿ ಬಿ.ಎ. ಭಾಸ್ಕರ್ ಕಾರ್ಯಕ್ರಮ ನಿರ್ವಹಿಸಿದರು.