ಶ್ರೀಮAಗಲ, ಜೂ. ೨೮: ಜುಲೈ ೪ ರಂದು ನಡೆಸಲು ನಿಗದಿಯಾಗಿದ್ದ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಬೆಳ್ಳಿಹಬ್ಬವನ್ನು ಕೆಲವು ತಾಂತ್ರಿಕ ಕಾರಣಗಳಿಂದ ಜುಲೈ ೨೩ನೇ ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ತಿಳಿಸಿದ್ದಾರೆ.
ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ಸಮಾಜದ ಆವರಣದಲ್ಲಿ ಜುಲೈ ೨೩ರಂದು ಬೆಳಿಗ್ಗೆ ೯-೩೦ ಗಂಟೆಯಿAದ ಸಂಜೆ ೬-೩೦ರವರೆಗೆ ನಡೆಯುವ 'ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಬೆಳ್ಳಿ ಹಬ್ಬದಂದು ೪ ವಿವಿಧ ಹಂತಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಥೆ, ಕಾದಂಬರಿ, ಕವನ, ಚುಟುಕ, ನಾಟಕ, ವೈಚಾರಿಕ, ಮಕ್ಕಳ ಕಥೆ,ಮಕ್ಕಳ ನಾಟಕ, ಭಕ್ತಿಗೀತೆ, ಸಣ್ಣ ಕಥೆಗಳು, ಮಕ್ಕಳ ವಿವಿಧ ಲೇಖನಗಳು, ಪದ್ಧತಿ-ಜಾನಪದ, ಪೌರಾಣಿಕ, ಗಾದೆ, ಯೋಗಾಭ್ಯಾಸ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯಗಳುಳ್ಳ ೨೫ ಪುಸ್ತಕಗಳನ್ನು ಇದೇ ಪ್ರಥಮ ಬಾರಿಗೆ ಏಕ ವೇದಿಕೆಯಲ್ಲಿ ಏಕ ಕಾಲಕ್ಕೆ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ ಕೊಡವ ತಕ್ಕ್ ಎಳ್ತ್ಕಾರಡ ಕೂಟ ನಡೆದು ಬಂದ ದಾರಿಯ ಸಮಗ್ರ ಚಿತ್ರಣಗಳುಳ್ಳ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ.
ಈ ಸಂದರ್ಭ ಕೂಟದ ೨೫ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮ ಹಾಗೂ ಪೈಪೋಟಿಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು.
ಇದರೊಂದಿಗೆ ಕೂಟದ ಸ್ಥಾಪನೆಗೆ ಕಾರಣಕರ್ತರಾದ ಪ್ರಥಮ ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರಾದಿಯಾಗಿ ಇದುವರೆಗೆ ಕೂಟದಲ್ಲಿ ಕಾರ್ಯ ನಿರ್ವಹಿಸಿದ ಅಧ್ಯಕ್ಷ, ಆಡಳಿತ ಮಂಡಳಿಯವರಿಗೆ, ಇದುವರೆಗೆ ಕೂಟದ ವತಿಯಿಂದ ಬಿಡುಗಡೆಯಾದ ಎಲ್ಲಾ ಪುಸ್ತಕಗಳ ಲೇಖಕರಿಗೆ ಹಾಗೂ ಕೂಟದ ಪುಸ್ತಕ ಯೋಜನೆಗೆ ಧನ ಸಹಾಯ ನೀಡಿದ ಎಲ್ಲಾ ದಾನಿಗಳಿಗೂ ಸೇರಿದಂತೆ ಒಟ್ಟು ೩೦೦ ಜನರಿಗೆ ಸನ್ಮಾನ ಮಾಡಲಾಗುವುದು.
ವಿವಿಧ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ, ಅತಿಥಿಗಳ ಭಾಷಣ ಸೇರಿದಂತೆ ಹಲವು ವಿಶೇಷಗಳನ್ನೊಳ ಗೊಂಡ ಈ ಕಾರ್ಯಕ್ರಮಕ್ಕೆ ದೇಶ ವಿದೇಶಗಳಲ್ಲಿರುವ ಕೊಡವ ಭಾಷೆ, ಸಾಹಿತ್ಯ, ಕಲೆ- ಸಂಸ್ಕೃತಿಯ ಅಭಿಮಾನಿಗಳು ಭಾಗವಹಿಸಲಿದ್ದು, ಕೂಟದ ಬೆಳ್ಳಿ ಹಬ್ಬಕ್ಕೆ ಎಲ್ಲಾ ಕೊಡವ ಸಂಘಟನೆಗಳು ಸಹಕಾರ ನೀಡಲಿವೆ ಎಂದು ಪ್ರಕಟಣೆಯಲ್ಲಿ 'ಕೂಟ'ದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ತಿಳಿಸಿದ್ದಾರೆ.