ಕುಶಾಲನಗರ, ಜೂ. ೨೬ : ನಾಲ್ಕು ವರ್ಷಗಳ ಹಿಂದೆ ಆಕಸ್ಮಿಕ ವಾಗಿ ಬೆಂಕಿ ಅವಘಡಕ್ಕೆ ಸಿಲುಕಿ ಬಲಿಯಾದ ಹರ್ಷಾಲಿ ಜ್ಞಾಪಕಾರ್ಥ ಅವರ ಪೋಷಕರು ಕುಶಾಲನಗರ ಸಮೀಪದ ದೊಡ್ಡಹೊಸೂರು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ ವಿತರಿಸಿದರು.
ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ ಡಿ. ಲೋಕೇಶ್ ಮತ್ತು ಸುಧಾ ಮಣಿ ದಂಪತಿ ತಮ್ಮ ಮಗಳ ಸಾವಿನ ನೋವು ಮರೆಯುವ ಸಲುವಾಗಿ ರಾಜ್ಯದ ವಿವಿಧ ಕಡೆ ಗ್ರಾಮಾಂತರ ಪ್ರದೇಶಗಳ ಸರಕಾರಿ ಶಾಲೆಯ ಅಗತ್ಯತೆಯುಳ್ಳ ಮಕ್ಕಳಿಗೆ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಸಹಾಯ ಹಸ್ತ ನೀಡುವ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದಾರೆ.
ತನ್ನ ಒಂದು ತಿಂಗಳ ಸಂಬಳ ವನ್ನು ಇಂತಹ ಕಾಯಕಗಳಿಗೆ ಮೀಸಲಿಡುವ ಲೋಕೇಶ್ ಮತ್ತು ಪತ್ನಿ ಸುಧಾಮಣಿ ಕುಟುಂಬ ಸುಮಾರು ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಶಾಲಾ ಪರಿಕರಗಳನ್ನು ವಿತರಿಸಿದ್ದಾರೆ. ದೊಡ್ಡಹೊಸೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೭೫ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿತರಿಸಿದರು.
ಈ ಸಂದರ್ಭ ದೊಡ್ಡ ಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಕರಗಳ ವಿತರಣೆಗೆ ನಡೆದ ಸರಳ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾದ ಎಂ ಎನ್ ಚಂದ್ರಮೋಹನ್ ನೆರವೇರಿಸಿದರು.
ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಣುಕಾ ಸ್ವಾಮಿ, ಸರಕಾರಿ ಇಂಜಿನಿಯರಿAಗ್ ಕಾಲೇಜು ದೈಹಿಕ ಶಿಕ್ಷಣ ನಿರ್ದೇ ಶಕರಾದ ಪ್ರಸಾದ್ ಸಾಲಿಯಾನ್, ಶಾಲಾ ಮುಖ್ಯ ಉಪಾಧ್ಯಾಯರಾದ ಚಿಕ್ಕ ಮಾದಪ್ಪ, ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ನಿವೃತ್ತ ಮುಖ್ಯೋ ಪಾಧ್ಯಾಯರಾದ ಸೀತಮ್ಮ ಗಣಪ, ಎಸ್ಡಿಎಂಸಿ ಸದಸ್ಯರು ಶಾಲಾ ಶಿಕ್ಷಕರು ಹಾಗೂ ಫೌಂಡೇಶನ್ ಪ್ರಮುಖರು ಇದ್ದರು.