ಮುಳ್ಳೂರು, ಜೂ. ೨೭: ತೇವಾಂಶ ಮತ್ತು ವಾತಾವರಣದ ಅನುಸಾರವಾಗಿ ಶಂಕುಹುಳು ಉತ್ಪತ್ತಿಯಾಗುತ್ತದೆ ಇದರ ಬಗ್ಗೆ ಬೆಳೆಗಾರರಿಗೆ ಅರಿವು ಮೂಡಿಸುವ ಮೂಲಕ ಶಂಕುಹುಳು ಬಾಧೆಯನ್ನು ನಿಯಂತ್ರಣಗೊಳಿಸಲು ಸಾಧ್ಯ ವಾಗುತ್ತದೆ ಎಂದು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ಕೇಂದ್ರದ ಕೀಟಶಾಸ್ತç ತಜ್ಞ ಡಾ.ಮಂಜುನಾಥ್ ರೆಡ್ಡಿ ಹೇಳಿದರು.
ಸಮೀಪದ ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾರತೀಯ ಕಾಫಿ ಮಂಡಳಿ ಸೋಮವಾರಪೇಟೆ ವಿಸ್ತರಣಾ ವಿಭಾಗ ಮತ್ತು ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಶಂಕುಹುಳು ಬಾಧೆಗೆ ಸಿಲುಕಿರುವ ಹಂಡ್ಲಿ, ಬೆಳಾರಳ್ಳಿ ವ್ಯಾಪ್ತಿಯ ಬೆಳೆಗಾರರಿಗೆ ಹಮ್ಮಿಕೊಂಡಿದ್ದ ಶಂಕುಹುಳು ನಿಯಂತ್ರಣ ಕುರಿತಾದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೇವಾಂಶ ಮತ್ತು ಶೀತ ವಾತಾವರಣಗಳಲ್ಲಿ ಶಂಕುಹುಳು ಉತ್ಪತ್ತಿಯಾಗುತ್ತದೆ. ಹೊರ ದೇಶದಲ್ಲಿ ೧೮೪೭ ರಲ್ಲಿ ಭಾರತದಲ್ಲಿ ೧೯೬೮ ರಲ್ಲಿ ಕಾಫಿ, ಬಾಳೆ, ಅಡಿಕೆ ಮುಂತಾದ ತೋಟಗಳಲ್ಲಿ ಶಂಕುಹುಳು ಕಾಣಿಸಿಕೊಂಡಿತ್ತು. ನಂತರ ಇದು ೨೦೦೩ರಲ್ಲಿ ಒಡಿಸ್ಸಾ, ಆಂಧ್ರ ಪ್ರದೇಶದ ಅರಣ್ಯಗಳಲ್ಲಿ ಹರಡಿತ್ತು. ಅರಣ್ಯ ಇಲಾಖೆ ಶಂಕುಹುಳು ಬಾಧೆಯನ್ನು ನಿಯಂತ್ರಗೊಳಿಸಿತ್ತು ಎಂದರು. ೨೦೧೫ರಲ್ಲಿ ಕೇರಳದ ತೆಂಗು, ಅಡಿಕೆ ತೋಟ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಶಂಕುಹುಳು ಹರಡಿ ೨೦೧೬ ರಿಂದ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಜಿಲ್ಲೆಯ ಕೆಲವು ಕಾಫಿ ತೋಟಗಳಲ್ಲಿ ಶಂಕುಹುಳು ಕಾಣಿಸಿ ಕೊಂಡಿದ್ದು ಕಳೆದ ೬ ವರ್ಷದಿಂದ ಕೊಡಗಿನ ಹಂಡ್ಲಿ, ಬೆಳ್ಳಾರಳ್ಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಶಂಕುಹುಳು ಬಾಧೆಯಾಗಿ ಪರಿಣಮಿಸಿದೆ ಇದನ್ನು ನಿಯಂತ್ರಿಸುವ ಸಲುವಾಗಿ ಕಾಫಿ ಮಂಡಳಿ ಮೂಲಕ ಬೆಳೆಗಾರರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ಶಂಕುಹುಳು ಕಾಟವನ್ನು ನಿಯಂತ್ರಿಸಲು ಬೆಳೆಗಾರರು ಎಕರೆಗೆ ಅನುಸಾರವಾಗಿ ಮೊಟಲ್ ಡಿಹೈಡ್ ರಾಸಾಯನಿಕ ಪುಡಿಯನ್ನು ಗೋಧಿ ತೌಡು ಅಥವಾ ಅಕ್ಕಿಯ ತೌಡು, ಬೆಲ್ಲ ಇದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಹರಳೆಣ್ಣೆಗೆ ಮಿಶ್ರಣ ಮಾಡಿ ಶಂಕುಹುಳುಗಳಿರುವ ಗಿಡಗಳ ಬುಡದಲ್ಲಿ ಇಡಬೇಕು. ಶಂಕುಹುಳು ಇದನ್ನು ತಿಂದು ಸತ್ತು ಹೋಗುತ್ತದೆ ನಂತರ ಸತ್ತ ಶಂಕುಹುಳುವನ್ನು ಗುಂಡಿಯೊಳಗೆ ಮುಚ್ಚುವುದರಿಂದ ಶಂಕುಹುಳು ಬಾಧೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಸೋಮವಾರಪೇಟೆ ಕಾಫಿ ಮಂಡಳಿ ವಿಸ್ತರಣಾಧಿಕಾರಿ ರಂಜಿತ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಂಕುಹುಳು ಬಾಧೆ ಕಾಣಿಸಿಕೊಂಡಿರುವ ಬೆಳೆಗಾರರು ಇದರ ಬಗ್ಗೆ ತಿಳಿದುಕೊಂಡು ತಮ್ಮ ತಮ್ಮ ತೋಟಗಳಲ್ಲಿ ಶಂಕುಹುಳು ಗಳನ್ನು ನಿಯಂತ್ರಿಸುವ ಮೂಲಕ ಮತ್ತೊಂದು ತೋಟಗಳಿಗೆ ಹಾಗೂ ಅಕ್ಕ ಪಕ್ಕದ ಗ್ರಾಮಗಳಲ್ಲಿ ಶಂಕುಹುಳು ಹರಡದಂತೆ ಎಚ್ಚರವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ.ಲಕ್ಷö್ಮಣ್, ಕೃಷಿ ಪತ್ತಿನ ಸಂಘದ ಅಧ್ಯಕ್ಷ ನಿರಂಜನ್, ಕಾರ್ಯಕ್ರಮದ ಆಯೋಜಕ ವೀರೇಂದ್ರಕುಮಾರ್, ಕಾಫಿ ಮಂಡಳಿ ಸಿಬ್ಬಂದಿ ಹಾಗೂ ಬೆಳೆಗಾರರು ಪಾಲ್ಗೊಂಡಿದ್ದರು.