ಮಡಿಕೇರಿ, ಜೂ. ೨೬: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಹಲವಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳೇ ಕಂಡು ಬರುತ್ತವೆ. ರಸ್ತೆ, ಚರಂಡಿ, ನೀರು, ಬೀದಿ ದೀಪದ ವ್ಯವಸ್ಥೆ ಹೀಗೇ.., ಸಾಮಾನ್ಯವಾಗಿ ಮಳೆಗಾಲ ಆರಂಭವಾಗುವ ಮುನ್ನವೇ ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ದುರಸ್ತಿ, ರಸ್ತೆ ಬದಿ ಕಾಡು ಕಡಿಯುವದು, ಚರಂಡಿ ದುರಸ್ತಿಪಡಿಸುವದು, ಬೀದಿ ದೀಪಗಳ ಸರಿಪಡಿಸುವ ಕೆಲಸಗಳು ನಡೆಯುತ್ತವೆ. ಆದರೆ, ಇಲ್ಲೊಂದು ರಸ್ತೆ ದುರಸ್ತಿ ಕಾಣದೆ ಕೆಲವು ವರ್ಷಗಳಾಗಿವೆ. ವಿಚಿತ್ರವೆಂದರೆ ಈ ರಸ್ತೆ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿಯೇ ಇಲ್ಲವಾಗಿದೆ..!
ನಗರಸಭಾ ವ್ಯಾಪ್ತಿಯ ೮ನೇ ವಾರ್ಡ್ಗೆ ಒಳಪಡುವ ಸಂತ ಜೋಸೆಫರ ಶಾಲಾ ಬಳಿಯಿಂದ ಭಗವತಿನಗರ ಕಡೆಗೆ ತೆರಳಲು ರಸ್ತೆಯೊಂದಿದೆ. ಈ ರಸ್ತೆ ಗುಂಡಿ ಬಿದ್ದು ದೊಡ್ಡ ಹೊಂಡಗಳಾಗಿವೆ. ರಸ್ತೆಯಲ್ಲಿರುವ ತಿರುವಿನಲ್ಲಿರುವ ಕೆರೆಯಂತಿರುವ ಗುಂಡಿಗಳಲ್ಲಿ ನೀರು ನಿಂತು ಹೇಗೆ ಮುಂದೆ ಸಾಗುವದೆಂಬದೇ ತಿಳಿಯದಂತಾಗಿದೆ. ಸಾಲದಕ್ಕೆ ಒಳ ಚರಂಡಿ ಮಂಡಳಿಯ ಕೊಡುಗೆಯಾಗಿರುವ ಮ್ಯಾನ್ ಹೋಲ್ ಚೇಂಬರ್ ಕುಸಿದು ಬಾವಿಯಂತೆ ಬಾಯ್ತೆರೆದು ನಿಂತಿದೆ. ಇನ್ನೊಂದು ವಿಶೇಷವೆಂದರೆ ಈ ರಸ್ತೆಯ ಎರಡೂ ಬದಿಯಲ್ಲಿ ಕೂಡ ನೀರು ಹರಿದು ಹೋಗಲು ಚರಂಡಿಯೇ ಇಲ್ಲವಾಗಿದೆ. ಮಳೆ ನೀರು ರಸ್ತೆಯಲ್ಲಿಯೇ ಹರಿದು ಇನ್ನಷ್ಟು ಹಾಳಾಗುತ್ತಿದೆ. ತಿರುವಿನಲ್ಲಿ ಬರೆ ಕುಸಿದಿದ್ದು, ಅದನ್ನು ಕೂಡ ತೆರವುಗೊಳಿಸದೆ ಇರುವದರಿಂದ ರಸ್ತೆ ಮತ್ತಷ್ಟು ಕಿರಿದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಈ ರಸ್ತೆ ಗಾಳಿಬೀಡು ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದ್ದು, ಪ್ರತಿನಿತ್ಯ ಗಾಳಿಬೀಡುವಿನಲ್ಲಿರುವ ರೆಸಾರ್ಟ್ಗಳಿಗೆ ತೆರಳುವ ಪ್ರವಾಸಿಗರೂ ಕೂಡ ಇದೇ ರಸ್ತೆಯನ್ನು ಅವಲಂಭಿಸುತ್ತಿದ್ದಾರೆ. ಭಗವತಿ ನಗರದಲ್ಲಿರುವ ವರ್ಕ್ಶಾಪ್ ಬಳಿಯಿಂದ ದೇವಾಲಯ ಕಡೆಗೆ ತೆರಳುವ ಹಾಗೂ ಇತ್ತ ಗಾಳಿಬೀಡು ಕಡೆಗೆ ತೆರಳುವ ರಸ್ತೆಯನ್ನು ಹೊಸದಾಗಿ ಡಾಮಬರೀ ಕರಣಗೊಳಿಸಲಾಗಿದೆ. ಆದರೆ ನಡುವಿನಲ್ಲಿರುವ ಈ ರಸ್ತೆಯನ್ನು ಮಾತ್ರ ಕಡೆಗಣಿಸಲಾಗಿದೆ. ಇದೀಗ ಶಾಲೆಗಳು ಆರಂಭವಾಗಿದ್ದು, ಶಾಲಾ ಮಕ್ಕಳು ತೆರಳುವ ಸಂದರ್ಭ ತೊಂದರೆಯಾಗುತ್ತಿದೆ ಎಂದು ಆ ವಿಭಾಗದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ವಿಭಾಗದ ನಗರಸಭಾ ಸದಸ್ಯರಿಗೆ, ಆಯುಕ್ತರ ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ವಾಹನಗಳಿಗೆ ದಾರಿ ಬಿಟ್ಟು ಕೊಡುವ ಸಂದರ್ಭ ಜಗಳ, ಅಪಘಾತಗಳೂ ಸಂಭವಿಸುತ್ತಿವೆ. ಇನ್ನಾದರೂ ಈ ಸಮಸ್ಯೆಗೆ ಸ್ಪಂದಿಸುವAತಾಗಲಿ ಎಂದು ಕೋರಿಕೊಂಡಿದ್ದಾರೆ. ಅಲ್ಲದೆ, ಕಾನ್ವೆಂಟ್ ಬಳಿಯ ಮೈದಾನದ ಬಳಿ ರಸ್ತೆಗೆ ಮಾರ್ಗಸೂಚಿಗಳನ್ನು ಅಳವಡಿಸುವಂತಾಗಬೇಕೆAದು ನಗರ ಸಭೆಯನ್ನು ಆಗ್ರಹಿಸಿದ್ದಾರೆ.