ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಹೇಳಿಕೆ
ನವದೆಹಲಿ, ಜೂ. ೨೭: ಒಂದು ದೇಶದಲ್ಲಿ ಎರಡೆರಡು ಕಾನೂನುಗಳು ಇರಲು ಹೇಗೆ ಸಾಧ್ಯ? ಎಂದು ಹೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ನರೇಂದ್ರ ಮೋದಿ ಬ್ಯಾಟ್ ಬೀಸಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ “ಮೇರಾ ಬೂತ್ ಸಬ್ಸೆ ಮಜ್ಬೂತ್” ಅಭಿಯಾನದ ಅಡಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಇಸ್ಲಾಂನಲ್ಲಿ ‘ತ್ರಿವಳಿ ತಲಾಖ್’ ಅದರ ಭಾಗವಾಗಿದ್ದರೆ, ಅದನ್ನು ಈಜಿಪ್ಟ್, ಇಂಡೋನೇಷಿಯಾ, ಕತಾರ್, ಜೋರ್ಡಾನ್, ಸಿರಿಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ಬಹುಪಾಲು ಮುಸ್ಲಿಂ ರಾಷ್ಟçಗಳಲ್ಲೇಕೆ ಆಚರಿಸಲಾಗುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭಾಗವಾಗಿರುವ ಏಕರೂಪ ನಾಗರಿಕ ಸಂಹಿತೆ ಪರವಾಗಿ ಮೋದಿ ಹೇಳಿಕೆ ನೀಡಿದ್ದಾರೆ.
ಹಗರಣಗಳ ತನಿಖೆ ನಡೆಸುತ್ತೇವೆ ಸಿಎಂ ಸಿದ್ದರಾಮಯ್ಯ
ಹಾಸನ, ಜೂ. ೨೭: ಮೆಡಿಕಲ್ ಕಾಲೇಜುಗಳ ನಿರ್ಮಾಣದಲ್ಲಿನ ಅಕ್ರಮ ಸೇರಿದಂತೆ ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಹಗರಣಗಳು ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವ ಎಲ್ಲಾ ಭರವಸೆಗಳನ್ನು ಸರ್ಕಾರ ಈಡೇರಿಸಲಿದೆ. ಕಾಂಗ್ರೆಸ್ನ ಐದು ಖಾತರಿಗಳ ಅನುಷ್ಠಾನದಿಂದ ಬೊಕ್ಕಸಕ್ಕೆ ವರ್ಷಕ್ಕೆ ೫೯,೦೦೦ ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಈ ವರ್ಷ ಆಡಳಿತದ ಮೇಲೆ ಸ್ವಲ್ಪ ಹೆಚ್ಚಿನ ಹೊರೆಯಾಗಿದೆ ಎಂದು ಹೇಳಿದರು. ನಾವು ಹಗರಣಗಳ ಬಗ್ಗೆ ವಿಚಾರಣೆ ನಡೆಸುತ್ತೇವೆ. ನಾಲ್ಕು ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದ್ದು, ತನಿಖೆ ನಡೆಸುತ್ತೇವೆ. ಅಲ್ಲದೆ, ಶೇ. ೪೦ರಷ್ಟು ಕಮಿಷನ್ ಕುರಿತಾಗಿಯೂ ತನಿಖೆ ನಡೆಸುತ್ತೇವೆ. ಕೋವಿಡ್-೧೯ ಅವಧಿಯಲ್ಲಿ ಆರೋಗ್ಯ ಪರಿಕರಗಳ ಖರೀದಿಗಳಲ್ಲಿ ಅಕ್ರಮಗಳು, ನೀರಾವರಿ ಯೋಜನೆಗಳಿಗೆ ಸಂಬAಧಿಸಿದ ಅಕ್ರಮಗಳು ಮತ್ತು ಬಿಟ್ಕಾಯಿನ್ ಹಗರಣಗಳು ನಡೆದಿವೆ. ಅವುಗಳೆಲ್ಲವನ್ನೂ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ಶಾಸಕ: ಸ್ವತಃ ಶಸ್ತçಚಿಕಿತ್ಸೆ ನಡೆಸಿದ ಡಾ. ರಂಗನಾಥ್
ತುಮಕೂರು, ಜೂ. ೨೭: ಜಿಲ್ಲೆಯ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರು ಬಡ ಮಹಿಳೆಗೆ ಸ್ವತಃ ತಾವೇ ಶಸ್ತçಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಎಂಬ ಮಹಿಳೆಯ ಕೀಲು ಡಿಸ್ ಲೊಕೆಟ್ ಆಗಿತ್ತು. ಶಸ್ತçಚಿಕಿತ್ಸೆ ಮಾಡಲು ರೂ. ೪-೫ ಲಕ್ಷ ಖರ್ಚಾಗುತಿತ್ತು. ಶಾಸಕರ ಬಳಿ ಬಂದು ಮಹಿಳೆ ನೋವು ತೋಡಿಕೊಂಡಿದ್ದರು. ಹೀಗಾಗಿ ಮಹಿಳೆಯನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಶಾಸಕ ರಂಗನಾಥ್ ಅವರು ಉಚಿತವಾಗಿ ಸ್ವತಃ ತಾವೇ ಆಪರೇಷನ್ ಮಾಡಿದ್ದಾರೆ. ಆಶಾ ಅವರು ಕಳೆದ ೧೦ ವರ್ಷಗಳ ಹಿಂದೆ ಯಶಸ್ವಿನಿ ಯೋಜನೆಯಲ್ಲಿ ಕೀಲು ಆಪರೇಷನ್ ಮಾಡಿಸಿಕೊಂಡಿದ್ದರು. ಆದರೆ ಈಗ ಮತ್ತೆ ಡಿಸ್ ಲೊಕೆಟ್ ಆಗಿತ್ತು. ಸರ್ಕಾರದ ಉಚಿತ ಯೋಜನೆಯಲ್ಲಿ ಒಂದೇ ಕಾಯಿಲೆಗೆ ಎರಡು ಬಾರಿ ಸರ್ಜರಿಗೆ ಅವಕಾಶ ಇರಲಿಲ್ಲ. ಸ್ವತಃ ರೋಗಿಗಳೇ ಹಣ ಸಂದಾಯ ಮಾಡಿ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು. ಇದನ್ನರಿತು ಈ ರೀತಿಯ ಕೀಲು ಮೂಳೆ ಸಮಸ್ಯೆ ಇದ್ದ ಮಹಿಳೆಯ ಉಚಿತ ಶಸ್ತçಚಿಕಿತ್ಸೆಗೆ ಶಾಸಕ ಡಾ. ರಂಗನಾಥ್ ಅವರು ಮುಂದಾಗಿದ್ದಾರೆ. ಶಾಸಕ ರಂಗನಾಥ್ ಮೂಲತಃ ಆರ್ಥೋಪೆಡಿಕ್ ವೈದ್ಯರಾಗಿದ್ದಾರೆ. ಬಡವ ಮಹಿಳೆಗೆ ಉಚಿತ ವೈದ್ಯಕೀಯ ಸೇವೆ ನೀಡಿದ ಶಾಸಕರ ಸೇವೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಆರು ವರ್ಷದ ಬಾಲಕಿ ಮೇಲೆ ಚಿರತೆ ದಾಳಿ
ಚಾಮರಾಜನಗರ, ಜೂ. ೨೭: ಚಾಮರಾಜನಗರ ಜಿಲ್ಲೆಯಲ್ಲಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಚಿರತೆಯೊಂದು ಆರು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದೆ. ಹನೂರು ತಾಲೂಕಿನಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಸುಶೀಲಾ ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಕಾಮಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯಿಂದ ಸಂತ್ರಸ್ತ ಗ್ರಾಮ ಮತ್ತು ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ಚಿರತೆ ಬಾಲಕಿಯನ್ನು ಮನೆಯಿಂದ ೨೦೦ ಮೀಟರ್ ದೂರದವರೆಗೆ ಎಳೆದೊಯ್ದು, ಕಾಡಿಗೆ ಎಳೆದೊಯ್ಯಲು ಯತ್ನಿಸಿದೆ. ಈಕೆಯ ಕಿರುಚಾಟ ಕೇಳಿದ ಪೋಷಕರು ಹಾಗೂ ಗ್ರಾಮಸ್ಥರು ಲಾಠಿ ಬೀಸಿ ಚಿರತೆಯನ್ನು ಓಡಿಸಿದ್ದಾರೆ.
ಅಯೋಧ್ಯೆ ರಾಮಮಂದಿರದಲ್ಲಿ ದುಬಾರಿ ಸೇವೆಗಳಿರುವುದಿಲ್ಲ: ಪೇಜಾವರ ಶ್ರೀ
ಮಂಗಳೂರು, ಜೂ. ೨೭: ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಸಾವಿರ, ಲಕ್ಷ ರೂ. ಪಾವತಿಸುವ ಸೇವೆಗಳಿರುವುದಿಲ್ಲ, ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಬಡವರ ಸೇವೆ ಮಾಡಿದರೆ ಅದೇ ಶ್ರೀರಾಮನಿಗರ್ಪಿಸುವ ಶ್ರೇಷ್ಠ ಕಾಣಿಕೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿಯೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಸೋಮವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ರಾಮ ಮಂದಿರದಲ್ಲಿ ೧೦ ಸಾವಿರ ರೂಪಾಯಿಗಳ ಸೇವೆ, ೧ ಲಕ್ಷ ರೂಪಾಯಿಗಳ ಮೊದಲಾದ ಯಾವ ಸೇವೆಯೂ ಇರುವುದಿಲ್ಲ. ಆದರೆ, ದೇವರ ದರ್ಶನಕ್ಕೆ ಬರಿಗೈಲಿ ಹೋಗಬಾರದು. ನಮಗೆ ದಾನ ಮಾಡುವ ಸಾಮರ್ಥ್ಯ ಇದ್ದರೆ, ನಮ್ಮೂರಿನ ಬಡವರಿಗೆ ಮನೆ ನಿರ್ಮಾಣ ಮಾಡಿ ಕೊಡೋಣ. ಅದನ್ನು ಶ್ರೀರಾಮ ದೇವರಿಗೆ ಸಮರ್ಪಿಸೋಣ ಎಂದು ಹೇಳಿದರು. ಸಂಪ್ರದಾಯದ ಸಂಕೇತವಾಗಿ ಭಕ್ತರು ದೇವಾಲಯಗಳಲ್ಲಿ ‘ಕಾಣಿಕೆ’ ಅರ್ಪಿಸುತ್ತಾರೆ. ಪ್ರತಿ ದೇವಾಲಯವು ಭಕ್ತರು ದೇವರಿಗೆ ಅರ್ಪಿಸಬಹುದಾದ ಸೇವೆಗಳ ವಿವರಗಳನ್ನು ನೀಡುತ್ತದೆ. ಆದರೆ, ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಅಂತಹ ದುಬಾರಿ ಸೇವೆಗಳಿರುವುದಿಲ್ಲ ಎಂದು ತಿಳಿಸಿದರು.