ಮಡಿಕೇರಿ, ಜೂ. ೨೫: ಕಳೆದ ಒಂದು ವರ್ಷ ಎಂಟು ತಿಂಗಳ ಕಾಲ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. ನಗರದಲ್ಲಿ ನಡೆದ ಸರಳ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ಬಿ.ಸಿ.ಸತೀಶ ಅವರಿಗೆ ಫಲಪುಷ್ಪ, ತಾಂಬೂಲ, ಶಾಲು ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ಅವಕಾಶ, ಆ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಹೆಚ್ಚಿನ ಕೆಲಸ ನಿರ್ವಹಿಸಲು ಸಾಧ್ಯವಾಯಿತು. ಕೊಡಗು ವಿಶೇಷ ಜಿಲ್ಲೆಯಾಗಿದ್ದು, ಇಲ್ಲಿ ಕೆಲಸ ನಿರ್ವಹಿಸುವುದು ವಿಶೇಷ ಅನುಭವ ಪಡೆದಂತೆ ಎಂದರು.
ವಿಧಾನಸಭಾ ಮತ್ತು ವಿಧಾನ ಪರಿಷತ್ ಚುನಾವಣೆ ಜೊತೆಗೆ ಹಲವು ಅಭಿವೃದ್ಧಿ ಕಾರ್ಯದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಂಡವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲು ಪ್ರಯತ್ನಿಸಿದ್ದೇನೆ. ಎಲ್ಲರ ಸಹಕಾರದಿಂದ ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯ ಎಂದು ಡಾ.ಬಿ.ಸಿ. ಸತೀಶ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಸ್.ಆಕಾಶ್ ಅವರು ಮಾತನಾಡಿ ಜಿಲ್ಲಾಧಿಕಾರಿ ಅವರು ತಂಡದ ನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆಗಳನ್ನು ಸುಲಭವಾಗಿ ಬಗೆ ಹರಿಸುತ್ತಿದ್ದರು. ನಿರ್ಗಮಿತ ಜಿಲ್ಲಾಧಿಕಾರಿ ಅವರ ಜೊತೆ ಕರ್ತವ್ಯ ನಿರ್ವಹಿಸಿರುವುದು ಒಂದು ಅನುಭವ. ಆ ನಿಟ್ಟಿನಲ್ಲಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿ ಕೆಲಸ ಮಾಡಿಸುತ್ತಿದ್ದರು ಎಂದು ಡಾ.ಎಸ್.ಆಕಾಶ್ ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರು ಚುನಾವಣೆ ಸೇರಿದಂತೆ ಕಂದಾಯ ಇಲಾಖೆ ಕೆಲಸದಲ್ಲಿ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುವುದನ್ನು ಕಲಿಸಿದ್ದಾರೆ ಎಂದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ ರಾಜ್ ಅವರು ಮಾತನಾಡಿ ಡಾ.ಬಿ.ಸಿ.ಸತೀಶ ಅವರು ಸದಾ ಚಟುವಟಿಕೆಯಿಂದ ಕ್ರೀಯಾಶೀಲರಾಗಿ ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸುತ್ತಿದ್ದರು. ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸ್ಮರಿಸಿದರು. ಜಿಲ್ಲಾಧಿಕಾರಿ ಕಚೇರಿಯ ಕಾನೂನು ಸಲಹೆಗಾರರಾದ ಲೋಕೇಶ ಕುಮಾರ್ ಮಾತನಾಡಿ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಶ್ರದ್ಧೆ, ಪರಿಶ್ರಮ ಮೆಚ್ಚುವಂತದ್ದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಐಟಿಡಿಪಿ ಅಧಿಕಾರಿ ಎಸ್. ಹೊನ್ನೆಗೌಡ, ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ, ನಗರಾಭಿವೃದ್ಧಿ ಯೋಜನಾ ಶಾಖೆಯ ಎಇಇ ಹೇಮಂತ್ ಕುಮಾರ್, ತಹಶೀಲ್ದಾರ್ ಪ್ರಕಾಶ್, ಪೌರಾಯುಕ್ತ ವಿಜಯ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ, ವಾರ್ತಾಧಿಕಾರಿ ಚಿನ್ನಸ್ವಾಮಿ ಭೂ ದಾಖಲೆಗಳ ಉಪ ನಿರ್ದೇಶಕ ಪಿ. ಶ್ರೀನಿವಾಸ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಶಿವು ಬಾದಾಮಿ, ಕೆಪಿಟಿಸಿಎಲ್ ಇಂಜಿನಿಯರ್ ಮಾದೇಶ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ, ತಹಶೀಲ್ದಾರರಾದ ಪ್ರಶಾಂತ್, ಶಿರಸ್ತೇದಾರರಾದ ಪ್ರಕಾಶ್, ಸತೀಶ್ ಇತರರು ಮಾತನಾಡಿದರು. ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.