ಮಡಿಕೇರಿ, ಜೂ. ೨೪: ಶ್ರೀಮಂಗಲ ಕೊಡವ ಸಮಾಜದ ಜಾಗದ ವಿರುದ್ಧ ನ್ಯಾಯಾಲಯದಲ್ಲಿ ಹೂಡಲ್ಟಟ್ಟಿದ್ದ ಸಿವಿಲ್ ಪ್ರಕರಣವೊಂದು ವಜಾಗೊಂಡಿದೆ. ಟಿ.ಶೆಟ್ಟಿಗೇರಿ ಗ್ರಾಮದ ೬ ಎಕರೆ ಪೈಸಾರಿ ಜಾಗವನ್ನು ಅತಿಕ್ರಮಣ ಮಾಡಿದ್ದ ಶಿವಚಾರರ ನಂಜಮ್ಮ ಎಂಬವರನ್ನು ಗ್ರಾಮಸ್ಥರು ತೆರವುಗೊಳಿಸಿ ಆ ಜಾಗದಲ್ಲಿ ಶ್ರೀಮಂಗಲ ಸೀನಿಯರ್ ಕಾಲೇಜು ಕಟ್ಟಡ ನಿರ್ಮಿಸಿ ನಂತರ ಡಿ.ಎಡ್ ಕಾಲೇಜನ್ನು ಪ್ರಾರಂಭಿಸಲಾಗಿತ್ತು. ನಂತರದ ವರ್ಷಗಳಲ್ಲಿ ಆ ಜಾಗದಲ್ಲಿ ಶ್ರೀಮಂಗಲ ನಾಡು ಕೊಡವ ಸಮಾಜ ಕಾರ್ಯನಿರ್ವಹಿಸುತ್ತಿತ್ತು. ಈ ನಡುವೆ ಶಿವಚಾರರ ನಂಜಮ್ಮ ಅವರ ಪುತ್ರಿ ಎಸ್.ಎಸ್. ಪಾರ್ವತಿ ಎಂಬವರು ಕೊಡವ ಸಮಾಜದ ಜಾಗ ತನಗೆ ಸೇರಿದ ಜಾಗವೆಂದು ಕೊಡವ ಸಮಾಜದ ವಿರುದ್ಧ ಹೂಡಿದ್ದ ಪ್ರಕರಣ ೨ ವರ್ಷಗಳ ಹಿಂದೆ ವಜಾಗೊಂಡಿತ್ತು. ಆದರೆ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ. ತಮ್ಮಯ್ಯ, ಎ.ಯು.ಉತ್ತಯ್ಯ, ಎಂ.ಎ. ತಿಮ್ಮಯ್ಯ, ಮದ್ರಿರ ವಿಷ್ಣು, ಕೆ.ಎನ್. ಉತ್ತಯ್ಯ, ಎಂ.ಎA. ಡಾಲಿ ಚಂಗಪ್ಪ, ಸುಳ್ಳಿಮಾಡ ಗೋಪಾಲ ಎಂಬವರುಗಳ ವಿರುದ್ಧ ಹೂಡಿದ್ದ ಪ್ರಕರಣ ಕೆಳ ನ್ಯಾಯಾಲಯದಲ್ಲಿ ವಜಾಗೊಂಡು ವೀರಾಜಪೇಟೆ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ೨೦ ವರ್ಷಗಳಿಂದ ನಡೆಯುತ್ತಿದ್ದ ಈ ಪ್ರಕರಣಕ್ಕೆ ಸಂಬAಧಿಸಿದAತೆ ಇಂದು ನ್ಯಾಯಧೀಶರಾದ ಎ. ನಾಗಿರೆಡ್ಡಿ ಅವರು ಪ್ರಕರಣವನ್ನು ವಜಾಗೊಳಿಸಿ ಅರ್ಜಿದಾರರಿಗೆ ನ್ಯಾಯಾಲಯ ಶುಲ್ಕ ಪಾವತಿಸುವಂತೆ ಸೂಚಿಸಿ ಆದೇಶಿಸಿದ್ದಾರೆ. ಕಾಲೇಜು ಹಾಗೂ ಕೊಡವ ಸಮಾಜದ ಪರವಾಗಿ ವಕೀಲ ಎಂ.ಟಿ. ಕಾರ್ಯಪ್ಪ ಅವರು ಯಾವುದೇ ಶುಲ್ಕವಿಲ್ಲದೇ ವಾದಿಸಿದ್ದರು.