ಸಿದ್ದಾಪುರ, ಜೂ. ೨೪: ಅಮ್ಮತ್ತಿ ಹಾಗೂ ಸಿದ್ದಾಪುರ ಭಾಗದಲ್ಲಿ ಉಪಟಳ ನೀಡುತ್ತಿರುವ ಹಾಗೂ ಮಾನವನ ಮೇಲೆ ದಾಳಿ ನಡೆಸುತ್ತಿರುವ ಪುಂಡಾನೆಯೊAದರ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಅಮ್ಮತ್ತಿ ಹೊಸೂರು, ಇಂಜಿಲಗೆರೆ, ಪುಲಿಯೇರಿ ಭಾಗದಲ್ಲಿ ಕಾಫಿ ತೋಟದಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿರುವ ಪುಂಡಾನೆಯೊAದನ್ನು ಅರಣ್ಯ ಇಲಾಖೆ ಗುರುತಿಸಿದ್ದು, ಇದನ್ನು ಖೆಡ್ಡಾಕ್ಕೆ ಬೀಳಿಸಲು ಮುಂದಾಗಿದೆ. ಕಳೆದ ಕೆಲವು ದಿನಗಳಿಂದ ಅಮ್ಮತ್ತಿ ಹಾಗೂ ಪಾಲಿಬೆಟ್ಟದ ಕಾಫಿ ತೋಟಗಳಲ್ಲಿ ಸುತ್ತಾಡುತ್ತಾ ಮಾನವನ ಮೇಲೆ ದಾಳಿ ನಡೆಸಿದ ಕಾಡಾನೆಯನ್ನು ಸೆರೆ ಹಿಡಿಯುವಂತೆ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಪುಂಡಾನೆಯ ಚಲನ ವಲನವನ್ನು ಕಂಡು ಹಿಡಿಯಲಾಗಿದೆ ಎಂದು ವೀರಾಜಪೇಟೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ನೆಹರು ತಿಳಿಸಿದ್ದಾರೆ. ಪುಂಡಾನೆಯು ಇತ್ತೀಚೆಗೆ ಪಾಲಿಬೆಟ್ಟದ ನಿವಾಸಿ ಕಾರ್ಮಿಕ ಬಾಬಿ ಎಂಬಾತನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಅಲ್ಲದೆ ಕೆಲವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು, ಈ ಹಿನ್ನೆಲೆಯಲ್ಲಿ ಪುಂಡಾನೆ ಸೆರೆಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಪುಂಡಾನೆಯು ಬಾಡಗ ಬಾಣಂಗಾಲ ಗ್ರಾಮದ ಬಿಬಿಟಿಸಿ ಸಂಸ್ಥೆಯ ಕಾಫಿ ತೋಟದಲ್ಲಿ ಪತ್ತೆಯಾಗಿದ್ದು, ಕಾಡಾನೆ ಸೆರೆ ಕಾರ್ಯಾಚರಣೆಗೆ ಅನುಭವಿ ಸಾಕಾನೆಯಾದ ಮತ್ತಿಗೋಡುವಿನ ಅಭಿಮನ್ಯು, ಸೇರಿ ದುಬಾರೆಯಿಂದಲೂ ನಾಲ್ಕು ಸಾಕಾನೆಗಳು ಆಗಮಿಸಿವೆ. ಇಲಾಖೆಯ ನುರಿತ ಸಿಬ್ಬಂದಿಗಳು ಕೂಡ ಪಾಲ್ಗೊಳ್ಳಲಿದ್ದಾರೆ. ಪುಂಡಾನೆಯನ್ನು ಸೆರೆ ಹಿಡಿಯಲು ಸಿದ್ಧತೆ ಕೈಗೊಂಡ ಬೆನ್ನಲ್ಲೇ ತುಂತುರು ಮಳೆಯು ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಆದರೂ ಛಲಬಿಡದ ಅರಣ್ಯ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಕೈಗೊಂಡಿದ್ದು ಮುಂದಿನ ಎರಡು ದಿನಗಳಲ್ಲಿ ಕಾಡಾನೆ ಸೆರೆ ಯಶಸ್ವಿಯಾಗಲಿದೆ ಎಂದು ಇಲಾಖಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಎರಡು ಕಾಡಾನೆಗಳನ್ನು ಸೆರೆಹಿಡಿಯಲು ಸರ್ಕಾರ ಆದೇಶ ನೀಡಿದ್ದು ಈ ಹಿನ್ನೆಲೆಯಲ್ಲಿ ಇದೀಗ ಒಂದು ಕಾಡಾನೆಯನ್ನು ತುರ್ತಾಗಿ ಹಿಡಿದು ಸ್ಥಳಾಂತರಿಸಲು ಇಲಾಖೆ ನಿರ್ಧರಿಸಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆ ಹಿಡಿಯಲು ಗುರುತಿಸಿದ ಪುಂಡಾನೆ ಬಗ್ಗೆ ಹಗಲಿರುಳು ಮಾಹಿತಿ ಪಡೆದು ಚಲನವಲನದ ಬಗ್ಗೆ ನಿಗಾ ವಹಿಸಿದ್ದಾರೆ.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿರವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ತಾಲೂಕು ಎಸಿಎಫ್ ನೆಹರೂ, ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ. ಚೆಟ್ಟಿಯಪ್ಪ ರಮೇಶ್, ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. -ವಾಸು ಎ.ಎನ್