ಗೋಣಿಕೊಪ್ಪ ವರದಿ, ಜೂ. ೨೪ : ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ೭೩ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.

೫೯ ಡಿಗ್ರಿ, ೧೨ ಎಂಎಸ್‌ಸಿ, ೨ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಶಾಸಕ ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಪದವಿ ಪ್ರದಾನ ಮಾಡಿದರು. ನಂತರ ಮಾತನಾಡಿ, ಶಿಕ್ಷಣದ ನಂತರದ ದಿನಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ದಿನಗಳಾಗುತ್ತವೆ. ಒಂದಲ್ಲ ಒಂದು ಒತ್ತಡ, ಆಯ್ಕೆಯಲ್ಲಿನ ಗೊಂದಲು ಸಾಮಾನ್ಯ. ಇದನ್ನು ನಿಭಾಯಿಸುವುದನ್ನು ಕಲಿತುಕೊಳ್ಳಬೇಕಿದೆ. ಹುದ್ದೆಗೆ ಪೂರಕ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅವಕಾಶ ದೊರೆಯುವಾಗ ಸಿದ್ಧತೆ ಜತೆಯಲ್ಲಿದ್ದರೆ ಯಶಸ್ಸು ಸಾಧಿಸಬಹುದು. ಪ್ರತಿಯೊಬ್ಬರು ಬದುಕಿನಲ್ಲಿ ಸಾಕಷ್ಟು ಹೋರಾಟ ಮಾಡಬೇಕಿದೆ. ಇದು ಸಾಮಾನ್ಯ ಎಂದು ಸಲಹೆ ನೀಡಿದರು. ಈ ಸಂದರ್ಭ ಕಾಲೇಜು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ಡೀನ್ ಡಾ. ಜಿ. ಎಂ. ದೇವಗಿರಿ ಪಾಲ್ಗೊಂಡು ಶುಭಕೋರಿದರು.