ಮಡಿಕೇರಿ, ಜೂ. ೨೪: ಮಡಿಕೇರಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹೊಂದಲು ಈ ಹಿಂದೆ ಸದಸ್ಯರುಗಳ ನಡುವೆ ಪೈಪೋಟಿ ಇರುತ್ತಿತ್ತು. ಆಡಳಿತಾರೂಢ ಪಕ್ಷದ ಸದಸ್ಯರುಗಳಿಗೆ ಈ ಸ್ಥಾನ ಮೀಸಲಾಗಿದೆಯಾದರೂ ವಿಪಕ್ಷ ಸದಸ್ಯರುಗಳು ಕೂಡ ಚುನಾವಣಾ ಕಣಕ್ಕಿಳಿಯುತ್ತಿದ್ದರು. ಆದರೆ., ಈ ಬಾರಿ ಈ ಸ್ಥಾನದ ಬಗ್ಗೆ ಯಾರಲ್ಲೂ ಆಸಕ್ತಿ ಇರುವಂತೆ ಕಂಡು ಬರುತ್ತಿಲ್ಲ. ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದಿಷ್ಟು ಆಕಾಂಕ್ಷಿಗಳಿದ್ದರಾದರೂ ಇದೀಗ ಎಲ್ಲರೂ ‘ನಾನಿಲ್ಲಪ್ಪ’ ಎಂಬ ಉದ್ಗಾರ ತೆಗೆಯುತ್ತಿದ್ದಾರೆ..!

ಬಿಜೆಪಿ ಬೆಂಬಲಿತ ಸದಸ್ಯರ ಬಹುಮತವಿರುವ ನಗರಸಭೆ ಆಡಳಿತ ಮಂಡಳಿಯಲ್ಲಿ ಬಿಜೆಪಿಯ ೧೬ ಮಂದಿ ಸದಸ್ಯರುಗಳಿದ್ದಾರೆ. ಐವರು ಎಸ್‌ಡಿಪಿಐ, ಓರ್ವ ಕಾಂಗ್ರೆಸ್ ಹಾಗೂ ಓರ್ವ ಜೆಡಿಎಸ್ ಸದಸ್ಯರಿದ್ದಾರೆ. ಅನಿತಾ ಪೂವಯ್ಯ ಅಧ್ಯಕ್ಷರಾಗಿ ಹಾಗೂ ಸವಿತಾ ರಾಖೇಶ್ ಉಪಾಧ್ಯಕ್ಷರಾಗಿದ್ದಾರೆ. ಸ್ಥಾಯಿ ಸಮಿತಿಗೆ ಹಿರಿತನದ ಆಧಾರದಲ್ಲಿ ಉಮೇಶ್ ಸುಬ್ರಮಣಿ ಅವರು ಮೊದಲ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಇದೀಗ ಅವರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಮುಂದಿನ ಅವಧಿಗೆ ಈಗಾಗಲೇ ಅಧ್ಯಕ್ಷರ ಆಯ್ಕೆ ಆಗಬೇಕಾಗಿದ್ದರೂ ಆಡಳಿತ ಪಕ್ಷದ ಸದಸ್ಯರುಗಳಲ್ಲಿ ಯಾರೂ ಕೂಡ ಮುಂದೆ ಬಾರದ ಕಾರಣ ಇನ್ನೂ ಆಗಿಲ್ಲ. ಒಂದೆರಡು ಮಂದಿ ಸದಸ್ಯರುಗಳ ಹೆಸರುಗಳು ಮುಂಚೂಣಿಯಲ್ಲಿತ್ತಾದರೂ ಇದೀಗ ಬಹುತೇಕ ಎಲ್ಲರೂ ಹಿಂದೆ ಸರಿಯುತ್ತಿರುವದು ವಿಚಿತ್ರ ಬೆಳವಣಿಗೆಯಾಗಿದೆ.

ಹಿರಿತನದ ಆಧಾರದಲ್ಲಿ ಕೆ.ಎಸ್.ರಮೇಶ್ ಅವರಿಗೆ ಅವಕಾಶವಿದೆಯಾದರೂ ತಾನು ಆಕಾಂಕ್ಷಿಯಲ್ಲವೆAದು ಅವರೇ ಹೇಳಿಕೊಂಡಿದ್ದಾರೆ. ಇನ್ನುಳಿದಂತೆ ಎಸ್.ಸಿ. ಸತೀಶ್, ಮಹೇಶ್ ಜೈನಿ, ಕೆ.ಎ. ಅಪ್ಪಣ್ಣ, ಶ್ವೇತಾ ಪ್ರಶಾಂತ್ ಅವರುಗಳ ಹೆಸರುಗಳು ಕೂಡ ಕೇಳಿ ಬರುತ್ತಿವೆಯಾದರೂ ಮಹೇಶ್, ಸತೀಶ್ ಹಾಗೂ ಶ್ವೇತಾ ಅವರುಗಳು ಕೂಡ ತಾವುಗಳು ಆಕಾಂಕ್ಷಿಯಲ್ಲ ಎಂದೇ ಹೇಳುತ್ತಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ ಸತೀಶ್ ಅವರ ಹೆಸರೇ ಕೇಳಿಬರುತ್ತಿದ್ದು, ಇತರ ಸದಸ್ಯರುಗಳು ಕೂಡ ಸಹಕಾರ ನೀಡುತ್ತಿರುವುದಾಗಿ ತಿಳಿದು ಬಂದಿದೆ. ಆದರೆ, ಸದಸ್ಯ ಅರುಣ್ ಶೆಟ್ಟಿ ಮಾತ್ರ ಪ್ರಬಲ ಆಕಾಂಕ್ಷಿಯಾಗಿದ್ದು, ಅಧ್ಯಕ್ಷ ಸ್ಥಾನ ತಮಗೆ ನೀಡುವಂತೆ ಪಕ್ಷದ ಪ್ರಮುಖರಲ್ಲಿ ಬೇಡಿಕೆ ಇಟ್ಟಿದ್ದಾರೆ. ಸದಸ್ಯರುಗಳಲ್ಲಿಯೂ ಸಹಕಾರ, ಬೆಂಬಲ ಕೋರಿದ್ದು, ಕೆಲವು ಸದಸ್ಯರುಗಳು ಬೆಂಬಲ ನೀಡುವದಾಗಿ ಹೇಳಿದ್ದಾರಾದರೂ ಕೆಲವರು ತಟಸ್ಥರಾಗಿರುವುದಾಗಿ ಹೇಳಲಾಗುತ್ತಿದೆ.

ಇನ್ನುಳಿದಂತೆ ಸಬಿತಾ, ಮಂಜುಳಾ, ಉಷಾ, ಶಾರದಾ, ಚಿತ್ರಾವತಿ, ಚಂದ್ರಶೇಖರ್ ಅವರುಗಳು ಸಮಿತಿಯಲ್ಲಿ ಸದಸ್ಯ ಸ್ಥಾನ ಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಎಲ್ಲರಿಗೂ ಸದಸ್ಯ ಸ್ಥಾನ ನೀಡಲಾಗುವದಿಲ್ಲ; ಸಮಿತಿಯಲ್ಲಿ ವಿಪಕ್ಷ ಸದಸ್ಯರುಗಳನ್ನೂ ಪರಿಗಣಿಸಬೆಕಾಗುತ್ತದೆ.

ನಾಳೆ ಸಭೆ

ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಸಂಬAಧ ತಾ.೨೬ರಂದು ಸಭೆ ಏರ್ಪಡಿಸಲಾಗಿದ್ದು, ಸಭೆಯಲ್ಲಿ ಯಾರು ಅಧ್ಯಕ್ಷರೆಂಬದು ನಿರ್ಧರಿತವಾಗಲಿದೆ. ಆಕಾಂಕ್ಷಿ ತಾನಲ್ಲ ಎಂದು ಹೇಳಿಕೊಳ್ಳುತ್ತಿರುವವರೇ ಅಧ್ಯಕ್ಷರಾದರೂ ಅಚ್ಚರಿಯೇನಿಲ್ಲ..!

?ಸಂತೋಷ್