ಗೋಣಿಕೊಪ್ಪ ವರದಿ, ಜೂ. ೨೪ : ಮಣ್ಣು ಪರೀಕ್ಷೆ ವರದಿ ಆಧಾರದಲ್ಲಿ ರಸಗೊಬ್ಬರ ಬಳಕೆ ಪದ್ಧತಿಯನ್ನು ಬೆಳೆಗಾರರು ಅಳವಡಿಸಿಕೊಳ್ಳಬೇಕು ಎಂದು ಕೊಡಗು ಪ್ಲಾಂರ‍್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಯು. ಅಶೋಕ್ ಹೇಳಿದರು.

ಗೋಣಿಕೊಪ್ಪ ಕಾಫಿ ಮಂಡಳಿಯ ವಿಸ್ತರಣಾ ಕೇಂದ್ರದಲ್ಲಿರುವ ಟೆಕ್ನಾಲಜಿ ಎವೊಲೂಷನ್ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಣ್ಣು ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಗೊಬ್ಬರ ನೀಡುವಾಗ ಮಣ್ಣಿಗೆ ಎಷ್ಟು ಬೇಕು ಅಷ್ಟನ್ನೆ ನೀಡಬೇಕಿದೆ. ಅನಾವಶ್ಯಕ ನಷ್ಟ ತಪ್ಪಿಸಬೇಕಿದೆ. ಕಾಫಿ ಸಸ್ಯಾಭಿವೃದ್ಧಿಯಲ್ಲಿ ಕಂಬ ಚಿಗುರು ಮೂಲಕ ಅಭಿವೃದ್ಧಿ ಪಡಿಸುವ ತಂತ್ರಜ್ಞಾನ ಹೆಚ್ಚು ಉಪಯುಕ್ತವಾಗಿದೆ. ಇದರತ್ತ ಬೆಳೆಗಾರರು ಚಿಂತನೆ ನಡೆಸಬೇಕು ಎಂದರು. ಕಾಫಿ ಮಂಡಳಿ ಮಾಜಿ ಸದಸ್ಯ ಡಾಲಿ ಚೆಂಗಪ್ಪ ಮಾತನಾಡಿ, ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ವಿಜ್ಞಾನಿ ಡಾ. ಜೆ. ಚೇತನ್ ಮಾತನಾಡಿ, ರೋಬಸ್ಟಾ ತಳಿಯಲ್ಲಿ ಕ್ಲೋನಲ್ ಪ್ರೊಪಗೇಷನ್ ತಂತ್ರಜ್ಞಾನ ಬಳಸಿ ಸಸ್ಯಾಭಿವೃದ್ದಿ ಪಡಿಸುವುದರಿಂದ ಹೆಚ್ಚು ಇಳಲುವರಿ ಪಡೆಯಬಹುದಾಗಿದೆ. ಬೆಳೆಗಾರರು ಈ ಬಗ್ಗೆ ಉತ್ಸುಕತೆ ತೋರಬೇಕು ಎಂದರು. ಕಾಫಿ ಮಣ್ಣಿನಲ್ಲಿ ಪರಿಷ್ಕರಣೆ ವಿಷಯದಲ್ಲಿ ವಿಜ್ಞಾನಿ ಡಾ. ನಡಾಫ್ ಮಾಹಿತಿ ನೀಡಿದರು. ಈ ಸಂದರ್ಭ ಪಾಲಿಹೌಸ್ ಉದ್ಘಾಟಿಸಲಾಯಿತು.

ನಿವೃತ್ತ ಅಧಿಕಾರಿ ಬಿ. ವಿ. ಮೋಹನ್‌ದಾಸ್, ಉಪ ನಿರ್ದೇಶಕಿ ಕೆ. ಶ್ರೀದೇವಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಮುಖ್ಯಸ್ಥ ಡಾ. ಸಿ. ಜಿ. ಕುಶಾಲಪ್ಪ, ಗೋಣಿಕೊಪ್ಪ ಕೆವಿಕೆ ಮುಖ್ಯಸ್ಥ ಡಾ. ಕೆ. ಎ. ದೇವಯ್ಯ ಇದ್ದರು.