ವೀರಾಜಪೇಟೆ, ಜೂ. ೨೪: ಕೆಲಸ ಮಾಡುತ್ತಿದ್ದ ಹೊಟೇಲ್ನಲ್ಲಿ ಕಳ್ಳತನ ಮಾಡಿ ಕಾರ್ಮಿಕ ಪರಾರಿಯಾಗಿರುವ ಘಟನೆ ವೀರಾಜಪೇಟೆಯಲ್ಲಿ ನಡೆದಿದೆ.
ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣ ಸಮೀಪದ ಗ್ರಾö್ಯಂಡ್ ಉಡುಪಿ ಸಸ್ಯಹಾರಿ ಹೊಟೇಲ್ನಲ್ಲಿ ಘಟನೆ ನಡೆದಿದ್ದು, ಕೆಲಸ ಮಾಡುತ್ತಿದ್ದ ಮೈಸೂರು ಮೂಲದ ನವೀನ್ (೨೮) ಪರಾರಿಯಾದ ಆರೋಪಿ. ಗಲ್ಲಾಪೆಟ್ಟಿಗೆಯಲ್ಲಿದ್ದ ರೂ. ೮೦ ಸಾವಿರ ಹಾಗೂ ಕೆಲಸಗಾರರ ಮೊಬೈಲ್ಗಳನ್ನು ಕದ್ದೊಯ್ದ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದೇ ತಿಂಗಳ ೬ನೇ ತಾರೀಕಿನಿಂದ ಆರೋಪಿ ನವೀನ್ ಕೆಲಸ ಹುಡುಕಿಕೊಂಡು ವೀರಾಜಪೇಟೆಯ ಗ್ರಾö್ಯಂಡ್ ಉಡುಪಿ ಹೊಟೇಲ್ಗೆ ಬಂದಿದ್ದಾನೆ. ಹೊಟೇಲಿನ ವ್ಯವಸ್ಥಾಪಕರು ಈತನಿಗೆ ಕೆಲಸ ನೀಡಿದ್ದರು. ತಾ. ೨೦ ರಂದು ಬೆಳಿಗ್ಗಿನಿಂದ ಸಂಜೆಯ ತನಕ ಸುಮಾರು ರೂ. ೮೦ ಸಾವಿರ ವಹಿವಾಟು ನಡೆದಿತ್ತು. ಈ ಹಣವನ್ನು ‘ಕ್ಯಾಶ್ ಬಾಕ್ಸ್’ನಲ್ಲಿಟ್ಟು ಅದರ ಕೀಲಿಯನ್ನು ಗೋಡೆಗೆ ತೂಗಿಸಿ ವ್ಯವಸ್ಥಾಪಕರು ಮನೆಗೆ ತೆರಳಿದ್ದಾರೆ.
ಅಂದು ರಾತ್ರಿ ಹೊಂಚು ಹಾಕಿ ಆರೋಪಿಯು ಹೊಟೇಲಿನ ಕಾರ್ಮಿಕರು ತಂಗುವ ಕೋಣೆಗೆ ಪ್ರವೇಶಿಸಿ ಸಹ ಕೆಲಸಗಾರರ ಮೊಬೈಲ್ಗಳನ್ನು ಅಪಹರಿಸಿ ನಂತರದಲ್ಲಿ ಗೋಡೆಯ ಮೇಲೆ ನೇತು ಹಾಕಲಾಗಿದ್ದ ಕೀಲಿಯನ್ನು ತೆಗೆದು ನಗದು ಇರಿಸಿದ್ದ ಪೆಟ್ಟಿಗೆಯಲ್ಲಿದ್ದ ರೂ. ೮೦ ಸಾವಿರ ಹಣದೊಂದಿಗೆ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿ.ಸಿ ಕ್ಯಾಮರಾದಲ್ಲಿ ರಾತ್ರಿ ೧.೩೦ ಗಂಟೆಗೆ ದಾಖಲಾಗಿವೆ.
ಮರುದಿನ ಬೆಳಿಗ್ಗೆ ವ್ಯವಸ್ಥಾಪಕರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ವ್ಯವಸ್ಥಾಪಕ ಶರೀನ್ ಎಂ.ಸಿ. ಅವರು ಕಾರ್ಮಿಕರನ್ನು ವಿಚಾರಿಸಿದಾಗ ಐವರು ಕಾರ್ಮಿಕರ ಮೊಬೈಲ್ಗಳು ಕಳ್ಳತನವಾಗಿರುವುದು ಈ ಸಂದರ್ಭ ತಿಳಿದು ಬಂದಿದೆ. ಈ ಸಂಬAಧ ವೀರಾಜಪೇಟೆ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಕಿಶೋರ್ ಕುಮಾರ್ ಶೆಟ್ಟಿ.