ಗೋಣಿಕೊಪ್ಪಲು, ಜೂ. ೨೩ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮವಾಗಿ ದನ, ಮರಳು, ಕಲ್ಲು ಸಾಗಾಟಕ್ಕೆ ಕಡಿವಾಣ ಹಾಕಲಾಗಿದೆ. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ನಿಯಂತ್ರಣ ಹೇರಲಾಗಿದೆ. ಇದರಿಂದ ಒಂದು ಗುಂಪು ಸಹಜವಾಗಿಯೇ ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ ಅದಕ್ಕೆ ತಾನು ಮಾನ್ಯತೆ ನೀಡುವುದಿಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಅರುವತ್ತೋಕ್ಲು ಸಮೀಪದ ಭರಣಿ ಸಭಾಂಗಣದಲ್ಲಿ ಅಜ್ಜಿಕುಟ್ಟಿರ ಕುಟುಂಬಸ್ಥರಿAದ ಆಯೋಜನೆ ಗೊಂಡ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಚುನಾವಣೆಗೂ ಮುನ್ನ ಜನತೆಗೆ ಕ್ಷೇತ್ರದಲ್ಲಿ ಬದಲಾವಣೆ ತರುವುದಾಗಿ ಭರವಸೆ ನೀಡಿದ್ದೆ. ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಜನರ ಮುಂದೆ ಮಾತನಾಡಿದ್ದೇನೆ. ಇದೀಗ ಕೊಟ್ಟ ಮಾತಿನಂತೆ ಕಳೆದ ಹತ್ತು ದಿನಗಳಿಂದ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಇದರಿಂದ ಸಹಜವಾಗಿಯೇ ವಿರೋಧ ಕಟ್ಟಿಕೊಂಡಿದ್ದೇನೆ. ವಿರೋಧಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಲಾರೆ.
ಆದರೆ ಕ್ಷೇತ್ರದ ಜನತೆ ನನ್ನೊಂದಿಗಿದ್ದಾರೆ. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಹಾಕಲಾಗಿದೆ ಎಂದರು.
(ಮೊದಲ ಪುಟದಿಂದ) ಅಜ್ಜಿಕುಟ್ಟಿರ ಕುಟುಂಬಸ್ಥರ ಹಿರಿಯರಾದ ಬೋಸ್ ಸುಬ್ಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಟುಂಬದ ಸದಸ್ಯ ಉತ್ತಮ ಸ್ಥಾನಕ್ಕೆ ಏರಿದ ಸಂದರ್ಭ ನಾವೆಲ್ಲರೂ ಒಗ್ಗಟ್ಟಿನಿಂದ ಬೆಂಬಲ ಸೂಚಿಸಬೇಕು ಎಂದರು. ವೇದಿಕೆಯಲ್ಲಿ ಅಜ್ಜಿಕುಟ್ಟಿರ ಕುಟುಂಬದ ಮಾಜಿ ಅಧ್ಯಕ್ಷ ಶಾಂತು ಅಪ್ಪಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಜ್ಜಿಕುಟ್ಟಿರ ಕುಟುಂಬದ ಸದಸ್ಯ ದೇವಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು. ದೇವಕ್ಕಿ ಪ್ರಾರ್ಥಿಸಿ, ಗಿರೀಶ್ ಹಾಗೂ ಸುನೀತ ನಿರೂಪಿಸಿ, ಭವ್ಯ ಸ್ವಾಗತಿಸಿ, ಮೀರಾ ವಂದಿಸಿದರು.