ಮಡಿಕೇರಿ, ಜೂ. ೨೩: ಕನ್ನಡ ಭಾಷೆ., ಸಾಹಿತ್ಯ., ಸಂಸ್ಕೃತಿ., ಕಲೆಯನ್ನು ಎತ್ತಿ ಹಿಡಿಯುತ್ತಾ ಉಳಿಸಿ, ಬೆಳೆಸಿಕೊಂಡು ಹೋಗುವಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಾ ಕನ್ನಡ ನಾಡಿನಲ್ಲಿ ಮನೆ ಮಾತಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದಲ್ಲೀಗ ಪದನಾಮ ಹೊಂದಿರುವ ಅಧ್ಯಕ್ಷರುಗಳ ಪದವಿಗಳಿಗೆ ಕಂಟಕ ಎದುರಾದಂತೆ ಕಂಡು ಬರುತ್ತಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಅಧ್ಯಕ್ಷರುಗಳಾಗಿ ನೇಮಕಗೊಂಡವರ ಪೈಕಿ ಕೆಲವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದರೆ ಕೆಲವರನ್ನು ಪರಿಷತ್ತಿನಿಂದಲೇ ಪದಚ್ಯುತಗೊಳಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಇಂತಹ ಬೆಳವಣಿಗೆ ಕಾಣಬಹುದಾಗಿದೆ. ನೂತನ ಆಡಳಿತ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆಯುವಷ್ಟರಲ್ಲಿ ಪದಾಧಿಕಾರಿಗಳೇ ಸ್ಥಾನ ತ್ಯಜಿಸುತ್ತಿರುವದು ಪರಿಷತ್ತಿಗೆ ಒದಗಿ ಬಂದಿರುವ ಕಂಟಕವೆAದೇ ಹೇಳಬಹುದು..!

ಶತಮಾನಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಅವಧಿಯಲ್ಲಿ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಂಡಿದೆ. ಕೊಡಗು ಜಿಲ್ಲೆಯಲ್ಲಿಯೂ ಶತಮಾನೋತ್ಸವ ಆಚರಿಸಲಾಗಿತ್ತು. ನಂತರದಲ್ಲಿ ಚುನಾವಣೆ ನಡೆದು ನೂತನ ಆಡಳಿತ ಮಂಡಳಿ ರಚನೆಯಾಯಿತು. ಕಳೆದ ೨೦೨೧ರ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆದು ನೂತನ ಜಿಲ್ಲಾಧ್ಯಕ್ಷರಾಗಿ ಮುಂದಿನ ಐದು ವರ್ಷ ಅವಧಿಗೆ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಈ ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಲೋಕೇಶ್ ಸಾಗರ್ ಪರಾಭವಗೊಂಡರು.

ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷವಷ್ಟೇ ಆಗಿದ್ದು ಅಷ್ಟರಲ್ಲೇ ಪದಾಧಿಕಾರಿಗಳು ಪರಿಷತ್ತಿನಿಂದ ಹೊರ ಹೋಗುವಂತಾಗಿದೆ. ಕಳೆದ ಅವಧಿಯಲ್ಲಿ ಐದು ವರ್ಷಗಳ ಕಾಲ ಲೋಕೇಶ್ ಸಾಗರ್ ನೇತೃತ್ವದ ತಂಡ ಉತ್ತಮವಾಗಿ ಪರಿಷತ್ತಿನ ಕಾರ್ಯನಿರ್ವಹಣೆ ನಿಭಾಯಿಸಿತ್ತು. ವಿವಿಧ ರೀತಿಯ ಹೊಸತನದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಹೆಸರು ಮಾಡುವ ಮೂಲಕ ನಂಬರ್ ಒನ್ ಸ್ಥಾನಕ್ಕೆ ಪರಿಷತ್ತನ್ನು ತಂದು ನಿಲ್ಲಿಸಿತ್ತು. ನಂತರದ ಅವಧಿಗೆ ಬದಲಾವಣೆ ಬಯಸಿದ ಪರಿಷತ್ತಿನ ಸದಸ್ಯರು ಚುನಾವಣೆಯಲ್ಲಿ ಕೇಶವ ಕಾಮತ್ ಅವರನ್ನು ಗೆಲ್ಲಿಸಿದ್ದರು.

ಬಳಿಕ ಐದು ತಾಲೂಕುಗಳ ರಚನೆ ಮಾಡಲಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ವಿವಿಧ ದತ್ತಿ ಕಾರ್ಯಕ್ರಮಗಳು, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜಿಲ್ಲಾ ಸಮ್ಮೇಳನಗಳನ್ನು ನಡೆಸಲಾಗಿದೆ. ಇದರೊಂದಿಗೆ ಇತರ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೆಲನಗಳು ಮುಗಿದ ಬೆನ್ನಲ್ಲೇ ತಾಲೂಕು ಅಧ್ಯಕ್ಷರುಗಳು ತಮ್ಮ ಸ್ಥಾನಗಳನ್ನು ತೊರೆಯುತ್ತಿದ್ದಾರೆ.

ಮಡಿಕೇರಿ ಅಧ್ಯಕ್ಷರ ರಾಜೀನಾಮೆ

ಮಡಿಕೇರಿ ತಾಲೂಕಿನ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅಂಬೆಕಲ್ ನವೀನ್ ಕುಶಾಲಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಕುಡೆಕಲ್ ಸಂತೋಷ್ ಅವರ ಬಳಿಕ ನವೀನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅಧ್ಯಕ್ಷರಾದ ಬಳಿಕ ಕೆಲವು ದತ್ತಿ ಕಾರ್ಯಕ್ರಮಗಳು ಹಾಗೂ ಬೆಟ್ಟಗೇರಿಯಲ್ಲಿ ತಾಲೂಕು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದರು.

ಸಮ್ಮೇಳನ ಕಳೆದ ಬಳಿಕ ಯಾವೊಂದೂ ಕಾರ್ಯಕ್ರಮ ನಡೆದಿರಲಿಲ್ಲ. ಇದೀಗ ತಮಗೆ ಬೇರೆ ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿಗಳಿದ್ದು, ತಮ್ಮನ್ನು ಪರಿಷತ್ತು ಅಧ್ಯಕ್ಷ ಸ್ಥಾನದಿಂದ ವಿಮುಕ್ತಿಗೊಳಿಸುವಂತೆ (ಮೊದಲ ಪುಟದಿಂದ) ಜಿಲ್ಲಾ ಅಧ್ಯಕ್ಷರಿಗೆ ಪತ್ರ ಬರೆದು ಕೋರಿಕೊಂಡಿದ್ದರು. ಅಲ್ಲದೆ ಪರಿಷತ್ತಿಗೆ ಸಂಬAಧಿಸಿದ ಯಾವದೇ ಸಭೆ, ಕಾರ್ಯಕ್ರಮಗಳಿಗೆ ಹಾಜರಾಗದೆ ದೂರ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಪರಿಷತ್ತಿನ ಜಿಲ್ಲಾ ಸಮಿತಿ ಸಭೆಯಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಿಮುಕ್ತಿಗೊಳಿಸಿ ಜಿಲ್ಲಾಧ್ಯಕ್ಷರು ನಿರ್ಣಯ ಮಾಡಿದ್ದಾರೆ. ಇದಕ್ಕೂ ಮುನ್ನ ತಾಲೂಕು ರಚನೆಯಾದ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಪ್ರತಿಮಾ ರೈ ಅವರು ಆರಂಭದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಕುಶಾಲನಗರ ಅಧ್ಯಕ್ಷರ ಪದಚ್ಯುತಿ

ಮಡಿಕೇರಿ ತಾಲೂಕು ಅಧ್ಯಕ್ಷರು ತಾವಾಗಿಯೇ ರಾಜೀನಾಮೆ ನೀಡಿದರೆ ಇತ್ತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಅವರನ್ನು ಪರಿಷತ್ತಿನ ರಾಜ್ಯಾಧ್ಯಕ್ಷರೇ ಪದಚ್ಯುತಿಗೊಳಿಸಿ ಆದೇಶಿಸಿದ್ದಾರೆ. ನೂತನ ಕುಶಾಲನಗರ ತಾಲೂಕು ರಚನೆಯಾದ ಬಳಿಕ ಪ್ರಥಮ ಅಧ್ಯಕ್ಷರಾಗಿದ್ದ ಎಂಡಿ.ರAಗಸ್ವಾಮಿ ಅವರ ಅಧಿಕಾರಾವಧಿ ಬಳಿಕ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೆ.ಎಸ್. ಮೂರ್ತಿ ಅಧಿಕಾರ ಸ್ವೀಕರಿಸಿದ್ದರು.

ಒಂದಿಷ್ಟು ಉತ್ತಮ ಕಾರ್ಯಕ್ರಮಗಳೊಂದಿಗೆ ಸಕ್ರಿಯವಾಗಿ ಚಟುವಟಿಕೆಯಲ್ಲಿದ್ದರು. ತಾಲೂಕು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಸುಮಾರು ಆರು ಲಕ್ಷದಷ್ಟು ಹಣ ಉಳಿತಾಯ ಮಾಡಿದ್ದಲ್ಲದೆ, ತಾಲೂಕು ಕಚೇರಿ ನಿರ್ಮಾಣಕ್ಕಾಗಿ ಸರಕಾರದಿಂದ ನಿವೇಶನವನ್ನು ಹೊಂದಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅವರ ಮೇಲೆ ವೈಯಕ್ತಿಕ ವಿಚಾರಕ್ಕೆ ಸಂಬAಧಿಸಿದAತೆ ಕೆಲವು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪರಿಷತ್ತಿನ ಜಿಲ್ಲಾಧ್ಯಕ್ಷರಿಗೆ ದೂರು ಸಲ್ಲಿದ್ದರಿಂದ ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು.

ಇದರೊಂದಿಗೆ ಸಮ್ಮೇಳನದಲ್ಲಿ ಉಳಿತಾಯವಾಗಿದ್ದ ಹಣವನ್ನು ಜಿಲ್ಲಾ ಸಮಿತಿಗೆ ನೀಡಬೇಕೆಂಬ ಒತ್ತಾಯವನ್ನು ಮೂರ್ತಿ ನಿರಾಕರಿಸಿದ್ದರಿಂದ ಈ ಬಗ್ಗೆಯೂ ಜಿಲ್ಲಾ ಸಮಿತಿಗೆ ಅಸಮಾಧಾನವಿತ್ತು. ರಾಜೀನಾಮೆ ನೀಡದ್ದರಿಂದ ಈ ಬಗ್ಗೆ ಜಿಲ್ಲಾಧ್ಯಕ್ಷರು ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದರು. ಇದೀಗ ರಾಜ್ಯಾಧ್ಯಕ್ಷರು ಮೂರ್ತಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ರಾಜೀನಾಮೆಯ ಹಾದಿಯಲ್ಲಿ.,

ಈರ್ವರು ಅಧ್ಯಕ್ಷರು ತಮ್ಮ ಸ್ಥಾನದಿಂದ ಹೊರಬಂದಿದ್ದರೆ, ಇನ್ನುಳಿದ ಮೂರು ತಾಲೂಕಿನ ಅಧ್ಯಕ್ಷರುಗಳು ಕೂಡ ಅದೇ ಹಾದಿಯಲ್ಲಿರುವದಾಗಿ ಹೇಳಲಾಗುತ್ತಿದೆ. ನೂತನ ತಾಲೂಕು ಪೊನ್ನಂಪೇಟೆ ಅಧ್ಯಕ್ಷರಾಗಿದ್ದ ಡಾ. ಚಂದ್ರಶೇಖರ್ ಅವರ ಬಳಿಕ ಇದಿಗ ಕೋಳೇರ ದಯಾ ಚಂಗಪ್ಪ ಅವರು ನೂತನ ಅಧ್ಯಕ್ಷರಾಗಿದ್ದಾರೆ. ದತ್ತಿ ಕಾರ್ಯಕ್ರಮಗಳನ್ನು ನಡೆಸಿದ್ದಲ್ಲದೆ, ಇವರ ನೇತೃತ್ವದಲ್ಲಿ ಗೋಣಿಕೊಪ್ಪದಲ್ಲಿ ಜಿಲ್ಲಾ ಸಮ್ಮೇಳನ ನಡೆದಿತ್ತು. ಇದೀಗ ಚಟುವಟಿಕೆಯಿಂದ ದೂರ ಉಳಿದಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ದೂರ ಉಳಿದಿದ್ದು, ಆಸಕ್ತ ಅರ್ಹರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಜಿಲ್ಲಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿರುವದಾಗಿ ತಿಳಿದು ಬಂದಿದೆ. ವೀರಾಜಪೇಟೆ ತಾಲೂಕಿನ ಅಧ್ಯಕ್ಷರಾಗಿದ್ದ ಮಧೋಶ್ ಪೂವಯ್ಯ ಅವರ ಬಳಿಕ ಇದೀಗ ನೂತನ ಅಧ್ಯಕ್ಷರಾಗಿ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿದ್ದ ದಿ. ಡಿ.ಜೆ.ಪದ್ಮನಾಭ ಅವರ ಪುತ್ರ ರಾಜೇಶ್ ಪದ್ಮನಾಭ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ವೀರಾಜಪೇಟೆ ಪುರಸಭಾ ಸದಸ್ಯರಾಗಿಯೂ ಪರಿಷತ್ತಿನ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ. ತಾಲೂಕು ಸಮ್ಮೇಳನದೊಂದಿಗೆ ಕೆಲವು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಇನ್ನೂ ಹೆಚ್.ಜೆ. ಜವರಪ್ಪ ಅವರ ಬಳಿಕ ಸೊಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಎಸ್.ಡಿ. ವಿಜೇತ್ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಹಿಂದಿನ ಲೋಕೇಶ್‌ಸಾಗರ್ ಅವರ ಅಧಿಕಾರಾವಧಿಯಲ್ಲಿಯೂ ಕೆಲವು ಸಮಯ ಅಧ್ಯಕ್ಷರಾಗಿದ್ದ ವಿಜೇತ್ ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕು ಸಮ್ಮೇಳನದೊಂದಿಗೆ ಕೆಲವು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಆದರೆ, ಅವರ ಮೇಲೆಯೂ ಕೆಲವೊಂದು ಆಪಾದನೆಗಳಿದ್ದು, ಜಿಲ್ಲಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳಾಗಿವೆ. ಒಂದು ಅಂದಾಜಿನ ಪ್ರಕಾರ ಅವರ ಅಧಿಕಾರ ಕೂಡ ಮೊಟಕುಗೊಳ್ಳುವ ಸೂಚನೆ ಕಂಡು ಬರುತ್ತಿದೆ.ಈ ನಡುವೆ ಜಿಲ್ಲಾ ಕಾರ್ಯದರ್ಶಿಯೋರ್ವರು ಕೂಡ ಪರಿಷತ್ತಿನ ಬಗ್ಗೆ ಅಸಮಾಧಾನಿತ ರಾಗಿರುವದಾಗಿಯೂ ಹೇಳಲಾಗುತ್ತಿದೆ. ಕುಶಾಲನಗರ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷರುಗಳು ಪತ್ರಕರ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇದುವರೆಗೆ ಪರಿಷತ್ತಿಗೆ ಆಯ್ಕೆಯಾಗಿರುವ ಅಧ್ಯಕ್ಷರುಗಳು ಬಹುತೇಕ ಎಲ್ಲರೂ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಸಾಕಷ್ಟು ಕನ್ನಡಪರ ಕೆಲಸ ಕಾರ್ಯಗಳನ್ನು ಮಾಡಿ ಕನ್ನಡವನ್ನು ನಾಡಿನೆಲ್ಲರ ಮನೆ ಮಾತಾಗಿಸಿದ್ದಾರೆ. ಆದರೆ, ಇದೇ ಪ್ರಥÀಮವೆಂಬAತೆ ಅಧ್ಯಕ್ಷರುಗಳ ಪದತ್ಯಾಗದ ಪರ್ವವಾಗಿದೆ ಎನ್ನಬಹುದು.

?ಸಂತೋಷ್