ಕೂಡಿಗೆ, ಜೂ. ೨೩ : ಕೂಡಿಗೆ ಸೈನಿಕ ಶಾಲೆ ಕೊಡಗಿನಲ್ಲಿ ಭಾರತೀಯ ವಾಯು ಸೇನೆಯಲ್ಲಿನ ವೃತ್ತಿ ಮಾರ್ಗದರ್ಶನ ಕುರಿತಾದ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪ್ರಸ್ತುತ ಅಭಿಯಾನದ ಭಾಗವಾಗಿ ವಾಯು ಸೇನಾ ಇಲಾಖೆಯ ಪ್ರಚಾರ ವಾಹನವು ತಾ. ೨೪ ರಿಂದ (ಇಂದಿನಿAದ) ಜುಲೈ ೩ ರವರೆಗೆ ಸೈನಿಕ ಶಾಲೆಯಲ್ಲಿ ಇರುತ್ತದೆ.

ಪ್ರಸ್ತುತ ಅಭಿಯಾನದ ಉದ್ದೇಶವು ಯುವಕರಲ್ಲಿ ಭಾರತೀಯ ವಾಯು ಸೇನೆಯ ಕುರಿತಾದ ಮಾಹಿತಿ, ಉದ್ಯೋಗವಕಾಶಗಳ ವಿವರಣೆ ಹಾಗೂ ಪ್ರೇರಣೆಯನ್ನು ನೀಡುವುದರೊಂದಿಗೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾರತೀಯ ವಾಯು ಸೇನೆಗೆ ಸೇರುವಂತೆ ಪ್ರೇರೇಪಿಸುವುದಾಗಿದೆ. ಈ ಪ್ರಚಾರ ವಾಹನವು ಭಾರತೀಯ ವಾಯು ಸೇನಾ ಇಲಾಖೆಯಲ್ಲಿರುವ ವಿವಿಧ ಉದ್ಯೋಗಾವಕಾಶಗಳ ಕುರಿತು ವೃತ್ತಿ ಮಾರ್ಗದರ್ಶನವನ್ನು ನೀಡಲಿದೆ. ಈ ವಾಹನವು ಒಳಗೊಂಡಿರುವ ಅಂಶಗಳು ನಾವೀನ್ಯ ಭರಿತವಾಗಿದ್ದು, `ನೋಟ, ಸ್ಪರ್ಶ ಮತ್ತು ಅನುಭವ' ತತ್ವದ ಆಧಾರದ ಮೇಲೆ ರಚಿಸಲ್ಪಟ್ಟಿದ್ದು, ವಿದ್ಯಾರ್ಥಿಗಳಿಗೆ ನೇರ ಅನುಭವವನ್ನು ನೀಡಲಿದೆ. ಪ್ರಸ್ತುತ ವಾಹನವು ಇದುವರೆಗೂ ತನ್ನ ೪೦೨ ಅಭಿಯಾನಗಳ ಮೂಲಕ ಸುಮಾರು ೨.೨೧ ಲಕ್ಷ ವಿದ್ಯಾರ್ಥಿಗಳನ್ನು ತಲುಪಿದೆ.

ಪ್ರಸ್ತುತ ಅಭಿಯಾನವು ಒಟ್ಟು ೩ ವಲಯಗಳಿಂದ ಕೂಡಿದ್ದು, ಪ್ರತಿಯೊಂದು ವಲಯವೂ ಭಾರತೀಯ ವಾಯು ಇಲಾಖೆಯಲ್ಲಿನ ವಿವಿಧ ಆಯಾಮಗಳ ಉದ್ಯೋಗವಕಾಶಗಳ ಕುರಿತು ಮಾಹಿತಿ ನೀಡುವುದಾಗಿದೆ. ಮೊದಲನೆಯ ವಲಯದಲ್ಲಿ ಎಲ್‌ಇಡಿ ಪ್ಯಾನಲ್‌ಗಳ ಮೂಲಕ ಭಾರತೀಯ ವಾಯು ಸೇನೆಯ ಕುರಿತ ಪ್ರೇರಣಾತ್ಮಕ ವೀಡಿಯೋಗಳ ಪ್ರದರ್ಶನವನ್ನು ಒಳಗೊಂಡಿದೆ. ಎರಡನೆಯ ವಲಯದಲ್ಲಿ ವಿದ್ಯಾರ್ಥಿಗಳು ಭಾರತೀಯ ವಾಯು ಸೇನೆಯ ವಿವಿಧ ಕಾರ್ಯಾಚರಣೆಗಳ ದೃಶ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ ಹಾಗೂ ಮೂರನೇ ವಲಯವು ವಾಯುಸೇನಾ ಇಲಾಖೆಯ ಹಲವು ಯುದ್ಧ ವಿಮಾನ, ಸಾಗಾಣಿಕಾ ವಾಹನ ಮತ್ತು ಹೆಲಿಕಾಪ್ಟರ್‌ಗಳ ಮಾದರಿಗಳನ್ನು ಒಳಗೊಂಡಿದೆ.

ಪ್ರಸ್ತುತ ಪ್ರಚಾರ ವಾಹನವು ತನ್ನ ಪ್ರಚಾರ ಕಾರ್ಯವನ್ನು ಸೈನಿಕ ಶಾಲೆಯಲ್ಲಿ ತಾ. ೨೯ರ ಬೆಳಿಗ್ಗೆ ೧೦ ಗಂಟೆಗೆ ಪ್ರದರ್ಶನವನ್ನು ಏರ್ಪಡಿಸಿರುತ್ತದೆ. ಈ ಪ್ರಚಾರ ಅಭಿಯಾನವು ಸಂಪೂರ್ಣ ಒಂದು ವಾರ ಕೊಡಗು ಜಿಲ್ಲೆಯಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಲಿದ್ದು, ಜೂನ್ ೨೬ರಂದು ಮಡಿಕೇರಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ, ತಾ. ೨೭ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ, ತಾ. ೨೮ರಂದು ೨ ವಿ ಜಿ ಕೊಡಗು ವಿದ್ಯಾಲಯ, ತಾ. ೨೯ರಂದು ಕೂಡಿಗೆಯ ಸೈನಿಕ ಶಾಲೆ, ತಾ. ೩೦ ರಂದು ಕೊಪ್ಪದಲ್ಲಿರುವ ನಳಂದ ಹಾಗೂ ಕುಶಾಲನಗರದ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಾಗೂ ಜುಲೈ ೧ರಂದು ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.