ಗೋಣಿಕೊಪ್ಪ ವರದಿ, ಜೂ. ೨೩: ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರ ಬೆಂಬಲ ಕೂಡ ಅಗತ್ಯ ಎಂದು ವೀರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಹೇಳಿದರು.

ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಸನ್ಮಾನ ಹಾಗೂ ಅಹವಾಲು ಸ್ವೀಕರಿಸಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಮದ್ಯವರ್ತಿಗಳನ್ನು ತಡೆಯಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಸಾರ್ವಜನಿಕರು ಕೂಡ ಮದ್ಯವರ್ತಿಗಳನ್ನು ದೂರವಿಡಲು ಸ್ಪಂದನ ನೀಡಬೇಕಿದೆ. ಕಂದಾಯ, ಸರ್ವೆ ಕಚೇರಿಗೆ ತೆರಳಿ ಸಾರ್ವಜನಿಕರೊಂದಿಗೆ ಉತ್ತಮವಾಗಿ ಅಹಂಕಾರ ಬಿಟ್ಟು ವ್ಯವಹರಿಸಿಲು ಸೂಚಿಸಲಾಗಿದೆ. ಉತ್ತಮ ಸಂಸ್ಕೃತಿ ಸ್ಥಾಪನೆಗೆ ಸಹಕಾರ ಅಗತ್ಯವಾಗಿದೆ. ಕೇರಳ ರಾಜ್ಯದಿಂದ ಅಕ್ರಮವಾಗಿ ಬರುತ್ತಿದ್ದ ಕೆಂಪು ಕಲ್ಲು ಸಾಗಾಟಕ್ಕೆ ತಡೆಯಾಗಿರುವುದರಿಂದ ಒಂದಷ್ಟು ಭ್ರಷ್ಟತೆ ಕೂಡ ನಿಯಂತ್ರಿಸಿದAತಾಗುತ್ತಿದೆ ಎಂದರು. ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ನಿಯಂತ್ರಣ, ಆರ್‌ಟಿಒ ಕಚೇರಿಯಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ, ಆರ್‌ಟಿಒ ಅಧಿಕಾರಿ ಪೊನ್ನಂಪೇಟೆಗೆ ತಿಂಗಳಿಗೆ ಎರಡು ಬಾರಿ ಆಗಮಿಸಿ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಬೇಕು. ಪೊನ್ನಂಪೇಟೆಗೆ ಸರ್ವೇ ಕಚೇರಿ ಸ್ಥಳಾಂತರಗೊಳಿಸಲು ಕ್ರಮಕೈಗೊಳ್ಳಬೇಕು ಎಂದರು. ಸ್ಥಳೀಯ ಶಾಸಕರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಸ್ಥಾನ ನೀಡಿರುವುದು ಹೆಮ್ಮೆಯ ವಿಚಾರ ಎಂದು ಪ್ರಶಂಸೆ ವ್ಯಕ್ತವಾಯಿತು.

ಈ ಸಂದರ್ಭ ಕಾರ್ಯಾಧ್ಯಕ್ಷ ಬಾಚೀರ ಕಾರ್ಯಪ್ಪ, ಸಲಹೆಗಾರ ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಕಾಳಿಮಾಡ ಕೆ. ಬೆಳ್ಯಪ್ಪ, ಖಜಾಂಚಿ ಅಜ್ಜಿಕುಟ್ಟೀರ ಸುಬ್ರಮಣಿ, ಸದಸ್ಯರು, ಪದಾಧಿಕಾರಿಗಳಿದ್ದರು.