ವೀರಾಜಪೇಟೆ, ಜೂ. ೨೧: ವಿದ್ಯಾರ್ಥಿಗಳು ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸುವಂತಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ನಿರ್ದೇಶÀರಾದ ಲೀಲಾವತಿ ಸಲಹೆಯಿತ್ತರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಜನೆಯ ತಾಲೂಕು ಮಟ್ಟದ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲಾಗಿದೆ ಎಂದರು. ಮಕ್ಕಳು ಉನ್ನತ ಹುದ್ದೆಗೆ ಹೋದ ನಂತರ ಕಷ್ಟಪಟ್ಟು ವಿದ್ಯೆ ಕಲಿಸಿದ ಪೋಷಕರನ್ನು ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಿ. ಅರುಣ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರ ಮಾಡುವಂತಹ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ, ವಿದ್ಯಾರ್ಥಿಗಳು ದುಷ್ಚಟದಿಂದ ದೂರ ಇದ್ದು ಶಿಕ್ಷಣದ ಕಡೆಗೆ ಗಮನಹರಿಸಬೇಕು ಎಂದರು.

ಪ್ರಬಾರ ಕ್ಷೇತ್ರ ಶಿಕ್ಷಣಧಿಕಾರಿ ಗಾಯತ್ರಿ ಮಾತನಾಡಿ ವಿದ್ಯಾರ್ಥಿಗಳು ಧರ್ಮಸ್ಥಳ ಯೋಜನೆ ನೀಡುತ್ತಿರುವ ಸಹಯಧನವನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣದ ಕಡೆಗೆ ಗಮನ ಹರಿಸುವುದರೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದರು. ಮಡಿಕೇರಿ-ವೀರಾಜಪೇಟೆ ಯೋಜನಾ ಅಧಿಕಾರಿ ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.