ಮೂರ್ನಾಡು, ಜೂ. ೨೨: ಪದವಿ ಕಾಲೇಜಿನ ಕಾವೇರಿ ಸಭಾಂಗಣದಲ್ಲಿ ಪೋಷಕ ಶಿಕ್ಷಕ ಸಭೆಯನ್ನು ಏರ್ಪಡಿಸಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ರೇಖಾ ಚಿಣ್ಣಪ್ಪ ಅವರು ಮಾತನಾಡಿ, ಕಾಲೇಜಿನ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ವಿವರಿಸಿದರು. ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು ಹಾಗೂ ಮೊಬೈಲ್ನಿಂದ ಅವರನ್ನು ಆದಷ್ಟು ದೂರವಿರಿಸಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪೋಷಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ್ ಪಿ.ಬಿ. ಅವರು ಮಾತನಾಡಿ, ಕಾಲೇಜು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೇಣು ಅಪ್ಪಣ್ಣ ಅವರು, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಬಹಳಷ್ಟು ಇದೆ, ವಿದ್ಯಾರ್ಥಿಗಳು ಉತ್ತಮ ನಡತೆಯನ್ನು ರೂಪಿಸಿಕೊಳ್ಳಬೇಕು, ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಕಲ್ಪನಾ ಸ್ವಾಗತಿಸಿದರೆ, ಉಪನ್ಯಾಸಕ ಹರೀಶ್ ನಿರೂಪಿಸಿ, ಉಪನ್ಯಾಸಕ ನವೀನ್ ವಂದಿಸಿದರು.