ಗೋಣಿಕೊಪ್ಪ, ಜೂ. ೨೨: ರಾಶಿ ರಾಶಿ ಕಸ ತಂದು ಎಲ್ಲೆಂದರಲ್ಲಿ ಸುರಿದವರನ್ನು ಊರಿನವರೇ ಪತ್ತೆ ಹಚ್ಚಿ ಸಾಕ್ಷಿ ಸಮೇತ ಹಿಡಿದುಕೊಟ್ಟ ಘಟನೆ ಅರುವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟುವಿನಲ್ಲಿ ನಡೆದಿದೆ. ಕಸ ಸುರಿದ ಹಿನ್ನಲೆಯಲ್ಲಿ ಪಂಚಾಯಿತಿಯು ೫ ಸಾವಿರ ದಂಡ ವಿಧಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ. ಅಲ್ಲದೆ ಬಿಸಾಕಿದ ಕಸವನ್ನು ಅವರಿಂದಲೇ ತೆಗೆಸುವ ಮೂಲಕ ಎಚ್ಚರಿಕೆ ನೀಡಿದೆ.

ಪೊನ್ನಂಪೇಟೆÀ ಭದ್ರಕಾಳಿ ದೇವಸ್ಥಾನ ಸಮೀಪದ ರಸ್ತೆಯಲ್ಲಿ ಆಗಿಂದಾಗ್ಗೆ ಅನಾಮಿಕರು ತ್ಯಾಜ್ಯಗಳನ್ನು ತಂದು ಎಸೆದು ಹೋಗುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಸಂಜೆಯ ವೇಳೆ ಟಿಪ್ಪರ್ ಲಾರಿವೊಂದರಲ್ಲಿ ಅಂದಾಜು ೩೦ ಚೀಲ ಕಸವನ್ನು ತಂದು ಎಸೆದು ಹೋಗಲಾಗಿತ್ತು.

ಈ ವಿಷಯ ತಿಳಿದ ಸ್ಥಳೀಯರಾದ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸೇರಿದಂತೆ ಇತರರು ಪರಿಶೀಲಿಸಿದಾಗ ೨೯ ಚೀಲಗಳಲ್ಲಿ ಮದ್ಯದಂಗಡಿಯ ಒಡೆದ ಖಾಲಿ ಬಾಟಲಿಗಳು, ಅರೆಬೆಂದ ಪ್ಲಾಸ್ಟಿಕ್ ಬಾಟಲಿ ಹಾಗೂ ಸಿಗರೇಟು ತುಂಡುಗಳು, ಮದ್ಯದ ಟೆಟ್ರಾ ಪ್ಯಾಕ್'ಗಳು ಸೇರಿದಂತೆ ಸಂಪೂರ್ಣ ಮದ್ಯದಂಗಡಿಯ ತ್ಯಾಜ್ಯ ವಸ್ತುಗಳು ಕಾಣಸಿಕ್ಕಿವೆ. ಆದರೆ ಇಂತಹದೆ ವಾಹನದಲ್ಲಿ ಬಂದು ಸುರಿದು ಹೋಗಿರುವ ಬಗ್ಗೆ ಯಾರು ಮಾಹಿತಿ ನೀಡಲಿಲ್ಲ. ಹತ್ತಿರದಲ್ಲಿದ್ದ ಶ್ರೀ ಭದ್ರಕಾಳಿ ದೇವಸ್ಥಾನದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ರಸ್ತೆಯಲ್ಲಿ ಸುಮಾರು ೪.೩೫ಕ್ಕೆ ಟಿಪ್ಪರ್ ವಾಹನವೊಂದು ಬಂದು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಹೊರತು ಸಿಸಿ ಕ್ಯಾಮರಾ ದೂರದಲ್ಲಿರುವ ಕಾರಣ ಎಲ್ಲವು ಅಸ್ಪಷ್ಟವಾಗಿ ಕಂಡಿದೆ. ಪೊನ್ನಂಪೇಟೆಯ ಒಂದಿಷ್ಟು ಮದ್ಯದಂಗಡಿಯಲ್ಲಿನ ತ್ಯಾಜ್ಯಗಳನ್ನು ಪರೀಶೀಲಿಸಿದ್ದರೂ ಏನೂ ಪ್ರಯೋಜನ ಆಗಲಿಲ್ಲ. ಮದ್ಯದ ಬಾಟಲಿ ಮೇಲಿನ ಬಾರ್ ಕೋಡ್ ಮೂಲಕ ಆರೋಪಿಗಳನ್ನು ಪತ್ತೆಹಚ್ಚಿದ ಪ್ರವೀಣ್ ಉತ್ತಪ್ಪ ಅರುವತೋಕ್ಲು ಗ್ರಾಮ ಪಂಚಾಯಿತಿಗೂ ದೂರು ನೀಡಿ, ನಂತರ ದೇವಸ್ಥಾನ ಆಡಳಿತ ಮಂಡಳಿ ಮೂಲಕ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊನೆಗೆ ಅರುವತೋಕ್ಲು ಗ್ರಾಮ ಪಂಚಾಯಿತಿಯವರು ಪೊನ್ನಂಪೇಟೆ ವೈನ್ಸ್ ಸ್ಟೋರ್ ಮಾಲಿಕರಿಗೆ ೫ ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದಾರೆ.

ಈ ಬಗ್ಗೆ ದೂರನ್ನು ಸ್ವೀಕರಿಸಿದ ಪೊಲೀಸರು ಕಸ ಸುರಿದವರನ್ನು ಠಾಣೆಗೆ ಕರೆಸಿ ಇನ್ನು ಈ ರೀತಿ ಆಗುವುದಿಲ್ಲವೆಂದು ಆತನಿಂದ ಮುಚ್ಚಳಿಕೆ ಬರೆಸಿಕೊಂಡು ಕಸ ಹಾಕಿದ ವೈನ್ಸ್ ಮಾಲಿಕರಿಂದಲೇ ಹಾಕಿದ ಕಸವನ್ನು ಅಲ್ಲಿಂದ ತೆರವುಗೊಳಿ ಸಲು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಮದ್ಯದಂಗಡಿಯ ಮಾಲಿಕರೇ ಖುದ್ದಾಗಿ ನಿಂತು ಕಸವನ್ನು ತೆರವುಗೊಳಿಸಿ, ಗೂಡ್ಸ್ ಆಟೋವೊಂದರಲ್ಲಿ ೨೯ ಚೀಲ ತ್ಯಾಜ್ಯ ಗಳು ತುಂಬಿ ವಾಪಾಸು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಸ್ಥಳದಲ್ಲಿ ಶ್ರೀ ಭದ್ರಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ, ಹಾಗೂ ಕಾರ್ಯದರ್ಶಿ ಮೂಕಳೇರ ರಮೇಶ್ ಹಾಗೂ ಪ್ರಮುಖರು ಹಾಜರಿದ್ದರು.