ಯೋಗ ಎಂಬ ಶಬ್ದ ಸಾಮಾನ್ಯ ಎಲ್ಲರಿಗೂ ಗೊತ್ತು. ಸುಯೋಗ ಎಂಬ ಶಬ್ದವೂ ದೂರವೇನಲ್ಲ.

ಆದರೆ, ಈ ಯೋಗ ಎಂಬ ಶಬ್ದವನ್ನು ಸಾಮಾನ್ಯರು ಯಾವದಕ್ಕೆ ಜೋಡಿಸುತ್ತಿದ್ದಾರೆ? ಜೂನ್ ೨೧ ವಿಶ್ವ ಯೋಗ ದಿನ!

ನಾಳೆ ಎಲ್ಲರ ‘ಸ್ಟೇಟಸ್’ ಯೋಗ ದಿನದ ಬಗ್ಗೆ, ಮರುದಿನ ಯೋಗದಲ್ಲಿ ಪಾಲ್ಗೊಂಡ ಚಿತ್ರಗಳು!

ಇಷ್ಟಕ್ಕೆ ಮುಗಿಯಿತೆ?

ಯೋಗಕ್ಕೆ ಸಹಸ್ರಾರು ವರುಷಗಳ ಹಿನ್ನೆಲೆಯಿದೆ. ಜಾತಿ-ಧರ್ಮಗಳು ಸೃಷ್ಟಿ ಆಗುವ ಮೊದಲೇ ಇದು ಅಸ್ತಿತ್ವ ಕಂಡುಕೊAಡಿದೆ. ಋಷಿ- ಮುನಿಗಳ ಉಸಿರಿನೊಂದಿಗೆ ಇದು ಹಾಸು ಹೊಕ್ಕಾಗಿದೆ. ಪತಂಜಲಿ ಮಹರ್ಷಿ ಯೋಗದ ಕುರಿತು ವಿಸ್ತೃತವಾಗಿ ಹೇಳಿದ್ದಾರೆ. ಒಟ್ಟು ಸುಮಾರು ೧೯೬ ಯೋಗ ಸೂತ್ರಗಳಿವೆ. ಅದರಲ್ಲಿ ಪ್ರಮುಖವಾದುದು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಅಷ್ಟಾಂಗ ಯೋಗ.

ನಾವೀಗ ಸಾಮಾನ್ಯವಾಗಿ ಯೋಗವನ್ನು ಕೇವಲ ಆಸನ, ಪ್ರಾಣಾಯಾಮಕ್ಕೆ ಸೀಮಿತಗೊಳಿಸಿಕೊಂಡಿದ್ದೇವೆ. ಹಾಗಾಗಿ ವಿಶ್ವ ಯೋಗ ದಿನದ ವ್ಯಾಖ್ಯಾನ ಎಂದರೆ ವಿಶ್ವದ ಎಲ್ಲೆಡೆ ಆರೋಗ್ಯ ಸವಾಲಿನ ರೋಗಗಳ ಪ್ರಮಾಣವನ್ನು ಕಡಿಮೆ ಮಾಡುವದು, ಅಭಿವೃದ್ಧಿ, ಶಾಂತಿ ಹರಡುವದು, ದೈಹಿಕ ಮಾನಸಿಕ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವದು, ಯೋಗದ ಮೂಲಕ ಪರಿಹಾರ ಒದಗಿಸುವದು!

ಇನ್ನೂ ಇದೆ. ಯೋಗ-ದೇಹ, ಮನಸ್ಸಿಗೆ ಯೌವ್ವನ ನೀಡುತ್ತದೆ. ವೈಚಾರಿಕತೆ, ಭಾವನಾತ್ಮಕತೆ, ಸೃಜನಶೀಲತೆಯನ್ನು ಹೆಚ್ಚು ಮಾಡುತ್ತದೆ.

ಈ ಯೌವ್ವನ ಆ ಮುಖಕಾಂತಿ ಎಲ್ಲಿಯ ತನಕ?

ಯೋಗದ ಪೂರ್ಣಾರ್ಥ ಬೇರೆಯೇ ಇದೆ. ಭಗವದ್ಗೀತೆಯಲ್ಲಿ ಯೋಗಾಸಕ್ತಿ ಹೊಂದುವ ಮನಗಳಿಗೆ ವಿವರವಾದ ಮಾಹಿತಿ ಇದೆ. ಕರ್ಮಯೋಗ, ಭಕ್ತಿಯೋಗ, ರಾಜಯೋಗ ಮತ್ತು ಜ್ಞಾನಯೋಗಗಳತ್ತ ಚಿತ್ತವಿತ್ತರೆ ಯೋಗ ಎಂಬದು ಕೇವಲ ಆಸನ ಮತ್ತು ಪ್ರಾಣಾಯಾಮ ಅಲ್ಲ, ಅದರಿಂದಾಚೆಯೂ ಗಳಿಸಲು, ಪಡೆಯಲು ಬಹಳಷ್ಟಿದೆ ಎಂಬ ಅರಿವನ್ನು ನೀಡುತ್ತದೆ.

ಅದರಿಂದಾಚೆ ಏನಿರಲು ಸಾಧ್ಯ?

ಅಷ್ಟಾಂಗ ಯೋಗದಲ್ಲಿ ಯೋಗ ಮತ್ತು ಪ್ರಾಣಾಯಾಮ ಕೇವಲ ಮೂರು ಮತ್ತು ನಾಲ್ಕನೇ ಮೆಟ್ಟಿಲುಗಳು. ಅದರಿಂದಾಚೆ ಏರಲು ಮತ್ತೆ ನಾಲ್ಕು ಮೆಟ್ಟಿಲುಗಳಿವೆ. ಪಯಣ ಆರಂಭಿಸುವ ಯಾರೂ ಅನಿರೀಕ್ಷಿತ ಕಾರಣ ಹೊರತಾಗಿ ಪಯಣ ಪೂರ್ಣಗೊಳಿಸದೆ ಇರರು. ಯೋಗ ವಿಚಾರದಲ್ಲೂ, ಪ್ರತಿ ಜೀವಿಯೂ ಪಯಣ ಪೂರ್ಣಗೊಳಿಸುವ ಅವಶ್ಯಕತೆ ಇದೆ.

ಯೋಗ ಎಂಬದು ಸಂಸ್ಕೃತದ ‘ಯುಜ್’ ಎಂಬ ಪದದಿಂದ ಬಂದಿದೆ. ‘ಯುಜ್’ ಎಂದರೆ ಬೆಸೆಯುವಿಕೆ, ಜೋಡಿಸುವಿಕೆ, ಪೋಣಿಸುವಿಕೆ. ಏನನ್ನು ಬೆಸೆಯುವದು?

ನಾವೆಲ್ಲ ಪುಸ್ತಕಗಳಲ್ಲಿ, ಭಾಷಣಗಳಲ್ಲಿ ಆತ್ಮ- ಪರಮಾತ್ಮ ಎಂಬ ಶಬ್ದ, ಬ್ರಹ್ಮ-ಪರಬ್ರಹ್ಮ ಎಂಬ ಶಬ್ದ, ಪ್ರಜ್ಞೆ-ಮಹಾ ಪ್ರಜ್ಞೆ ಎಂಬ ಪದಗಳನ್ನು ಕಾಣುತ್ತೇವೆ, ಕೇಳುತ್ತೇವೆ. ಓದುವ, ಕೇಳುವ ಇಂತಹ ಶಬ್ದಗಳ ಹಿನ್ನೆಲೆ ಏನು, ಮೂಲ ಏನು ಎಂದು ಪ್ರಶ್ನಿಸದಿರುವದು, ವಿಶ್ಲೇಷಿಸದಿರುವದು, ಚಿಂತನೆ ಹರಿಸದಿರುವದು, ಅಧ್ಯಯನ ಮಾಡದೆ ಇರುವದು ನಮ್ಮನ್ನು ಯೋಗ ಎಂದರೆ “ಇಷ್ಟೇ” ಎಂಬ ಅರ್ಧ ದಾರಿಯಲ್ಲಿ ತಂದು ನಿಲ್ಲಿಸಿದೆ.

ಪಯಣ ಯಾವದೇ ಇರಲಿ, ಅದು ಪೂರ್ಣವಾಗಬೇಕು. ಭಾರತೀಯರಾದ ನಾವು ಅಧ್ಯಾತ್ಮಿಕತೆಯನ್ನು, ಅದರ ತತ್ತ÷್ವಗಳನ್ನು ಒಪ್ಪಿಕೊಳ್ಳಬೇಕು. ಅಭ್ಯಸಿಸಬೇಕು. ಅಧ್ಯಾತ್ಮದ ಒಂದು ಅಂಗ ‘ಯೋಗ’. ನಾವು ಪುನರ್ಜನ್ಮವನ್ನು ಒಪ್ಪುತ್ತೇವೆ. ಆದಿ ಶಂಕರಾಚಾರ್ಯರ ಮಾತಿನಂತೆ ಒಂದು ಜೀವಿ ಮಾನವ ಜನ್ಮ ಪಡೆಯಲು ಎಂಭತ್ತನಾಲ್ಕು ಲಕ್ಷ ಜನ್ಮ ಪಡೆದ ಬಳಿಕವಷ್ಟೇ ಸಾಧ್ಯ. ಮಾನವ ಜನ್ಮ ಪಡೆದರಷ್ಟೇ ಮೋಕ್ಷ ಹೊಂದಲು ಸಾಧ್ಯ.

ಈ ಜೀವಿಗಳಲ್ಲಿ ಪರಮಾತ್ಮನು ಆತ್ಮ ಸ್ವರೂಪಿಯಾಗಿ ಇರುತ್ತಾನೆ. ಅದನ್ನು ಬ್ರಹ್ಮನ್ ಎನ್ನುತ್ತಾರೆ. ಸಂಕುಚಿತ ಪ್ರಜ್ಞೆ ಎನ್ನುತ್ತಾರೆ. ಬೇರೆ ಧರ್ಮಗಳೂ ಇದನ್ನು ಹಲವು ರೀತಿ ವ್ಯಾಖ್ಯಾನಿಸುತ್ತವೆ.

ಒಂದು ಮಹಾನ್ ಚೈತನ್ಯ, ಒಂದು ಅದ್ಭುತ ಶಕ್ತಿ ಬ್ರಹ್ಮಾಂಡವನ್ನು ನಿಯಂತ್ರಿಸುತ್ತಿದೆ ಎಂದು ಸಾಮಾನ್ಯ ಎಲ್ಲರೂ ಒಪ್ಪುತ್ತಾರೆ. ಯೊಗ-ಯುಜ್, ಬೆಸೆಯುವಿಕೆ, ಜೋಡಿಸುವಿಕೆ, ಪೋಣಿಸುವಿಕೆ ಎಂಬ ಶಬ್ದದ ಅರ್ಥ ಇಲ್ಲಿ ಸರಿ ಹೊಂದುತ್ತದೆ. ನಮ್ಮ ಈ ದೇಹ ಹುಟ್ಟಿಯೇ ಇರಲಿಲ್ಲ ಎಂಬAತೆ ಎಲ್ಲಿಯೋ, ಎಂದೋ, ಹೇಗೊ ಧೊಪ್ಪೆಂದು ಬಿದ್ದು ಮರೆಯಾಗುತ್ತದೆ. ಆದರೆ ಜನ್ಮಾಂತರಗಳಿAದ ಅದರ ನಂಟನ್ನು ಪಡೆದು ಬರುವ ಆತ್ಮ ಒಂದು ದಿನ ಪರಮಾತ್ಮನಲ್ಲಿ ಒಂದಾಗಬೇಕಿದೆ. ಮೂಲಕ್ಕೆ ಮರಳಬೇಕಿದೆ. ಪ್ರಜ್ಞೆ ಮಹಾ ಪ್ರಜ್ಞೆಯೊಂದಿಗೆ ಬೆಸೆಯಬೇಕಿದೆ. ಬ್ರಹ್ಮ- ಪರಬ್ರಹ್ಮದಲ್ಲಿ ಲೀನವಾಗಬೇಕಿದೆ. ಈ ಕ್ರಿಯೆಯನ್ನೇ ಜೋಡಿಸುವಿಕೆ, ಬೆಸೆಯುವಿಕೆ, ಯುಜ್ ಎನ್ನುತ್ತೇವೆ.

ದೇಹಾರೋಗ್ಯ ರಕ್ಷಣೆ, ಮಾನಸಿಕ ನೆಮ್ಮದಿ ಇತ್ಯಾದಿ ನಮಗೆ ಅವಶ್ಯ ಬೇಕಿದೆ. ಆದರೆ ಅದನ್ನು ಗಳಿಸಿ ಮತ್ತೆ ನಶ್ವರ ಪ್ರಪಂಚದ ಅಶಾಶ್ವತ ವಸ್ತು ವಿಚಾರಗಳಲ್ಲಿ ಮುಳುಗಿ ಪುನರ್ಜೀವನಕ್ಕೆ ನಾಂದಿ ಹಾಡುವದು ನಿಯಮವಲ್ಲ.

೮-೯ ನೇ ಶತಮಾನದ ಮಹಾನ್ ಯೋಗಿ ಗೊರಕನಾಥ್ ಅಧ್ಯಾತ್ಮಲೋಕ ಕಂಡ ಮಹಾನ್ ಹಠಯೋಗಿ. ಆತ ಶಿಷ್ಯರೊಂದಿಗೆ ಸ್ಥಳದಿಂದ ಸ್ಥಳಕ್ಕೆ ಆಗಸದಲ್ಲಿ ಪಕ್ಷಿಯಂತೆ ಹಾರಾಡಿಕೊಂಡೇ ತೆರಳುತ್ತಿದ್ದ. ಯೋಗ ಸಾಧನೆಯ ಮೂಲಕ ದೇಹವನ್ನು ಹೇಗೆಂದರೆ ಹಾಗೆ ಕುಣಿಸುತ್ತಿದ್ದ. ಆದರೆ ಕೊನೆಗೊಮ್ಮೆ ಆತನಿಗೆ ಜ್ಞಾನೋದಯವಾಗುತ್ತದೆ. ಸಿದ್ಧಸಿದ್ಧಾಂತ ಪದ್ಧತಿ ಎಂಬ ಪುಸ್ತಕದಲ್ಲಿ ಆತ ಹೀಗೆ ಉಲ್ಲೇಖಿಸುತ್ತಾನೆ “ಹಠಯೋಗದಿಂದ ಶರೀರವನ್ನು ಎಷ್ಟು ಪಳಗಿಸಿ ಏನುಪಯೋಗ? ಅಂತಹ ಯೋಗ ಸಾಮ್ರಾಟ ಪತಂಜಲಿ ಯೋಗಿಯ ಪತ್ನಿಯೇ ವಿಧವೆ ಆಗಲಿಲ್ಲವೆ?’’ ಎಂದು ಪ್ರಶ್ನಿಸುತ್ತಾನೆ. ಬಳಿಕ ಆತ ಧ್ಯಾನಾಭ್ಯಾಸಕ್ಕೆ, ಭಗವಂತನಲ್ಲಿ ಒಂದಾಗುವ, ಲೀನವಾಗುವ ಮಾರ್ಗದರ್ಶನ ನೀಡಬಲ್ಲ ‘ಸೋಹಂ’ ಧ್ಯಾನಯೋಗ ಪ್ರಚಾರ ಮಾಡುತ್ತಾನೆ.

ಪ್ರತಿ ಜೀವಿಯೂ ಕ್ಷಣ ಕ್ಷಣಕ್ಕೂ ವಿಕಾಸ ಹೊಂದುತ್ತಲೇ ಇರುತ್ತದೆ. ಜೀವಿ-ತಾನು ಬಂದ ಮೂಲಕ್ಕೆ ಮರಳುವ ಅವ್ಯಕ್ತ ತವಕದಲ್ಲಿ ಇರುತ್ತದೆ. ಪವಿತ್ರವಾದ ಮಾನವ ಜನ್ಮ ದೊರೆತ ಕೂಡಲೇ ಪ್ರಾರಬ್ಧಕರ್ಮ ನಿವಾರಣೆಯ ವೇಗ ಹೆಚ್ಚುತ್ತದೆ. ನದಿ ನೀರು ತನ್ನ ಮೂಲವಾದ ಸಾಗರಕ್ಕೆ ಮರಳುವಂತೆ ಆತ್ಮವು ಪರಮಾತ್ಮನತ್ತ ಸಾಗಲು ಹಂಬಲಿಸುತ್ತದೆ.

ಈ ಕ್ರಿಯೆ ಪೂರ್ಣಗೊಳ್ಳಲು ೩-೪ನೇ ಮೆಟ್ಟಿಲಾದ ಆಸನ ಪ್ರಾಣಾಯಾಮಗಳಿಂದ ಆಚೆ ಪ್ರತ್ಯಾಹಾರ, ಧಾರಣ, ಧ್ಯಾನದಲ್ಲಿ ತೊಡಗುವ ಕಲೆಯನ್ನು ಅರಿತವರಿಂದ ಪಡೆದರೆ ಸಮಾಧಿ ಸ್ಥಿತಿ, ಅಂದರೆ ಸಮಾಗಮ ಸ್ಥಿತಿಗೆ ಏರಲು ಸಾಧ್ಯ.

ಜೀವನ ಪರಿಪೂರ್ಣ ಆಗಬೇಕಿದ್ದಲ್ಲಿ, ಪುಣ್ಯ ಭೂಮಿಯ ಪವಿತ್ರ ತತ್ತ÷್ವಗಳನ್ನು ಅರಿಯಬೇಕು, ಅನುಭವಿಸಬೇಕು.

ಯೋಗದ ಪೂರ್ಣಾರ್ಥ ಅರಿತು ಜೀವನ ಪಾವನವಾಗಿಸಬೇಕು.

- ಬಿ.ಜಿ. ಅನಂತಶಯನ, ಸಲಹಾ ಸಂಪಾದಕ