ವಿಧಾನಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಬೆಂಗಳೂರು, ಜೂ. ೨೦: ರಾಜ್ಯ ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್ನ ಖಾಲಿ ಇರುವ ಮೂರು ಸ್ಥಾನಗಳಿಗೆ ತಾ. ೩೦ ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಪಕ್ಷದ ಮೊದಲ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಎರಡನೆಯ ಅಭ್ಯರ್ಥಿಯಾಗಿ ಎನ್.ಎಸ್. ಬೋಸರಾಜು ಹಾಗೂ ಮೂರನೇ ಅಭ್ಯರ್ಥಿಯಾಗಿ ತಿಪ್ಪಣ್ಣಪ್ಪ ಕಮಕನೂರು ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
‘ಫೇಕ್ನ್ಯೂಸ್’ಗಳ ಮೂಲ ಪತ್ತೆಗೆ ಸಿದ್ದರಾಮಯ್ಯ ಸೂಚನೆ
ಬೆಂಗಳೂರು, ಜೂ. ೨೦: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗುತ್ತಿರುವ ‘ಫೇಕ್ ನ್ಯೂಸ್’ ಮೂಲ ಪತ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇಂದು ತಮ್ಮನ್ನು ಭೇಟಿ ಮಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಅವರ ಜೊತೆಗೂ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ೨೦೧೩ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಫೇಕ್ ನ್ಯೂಸ್ಗಳ ಹಾವಳಿ ಹೆಚ್ಚಾಗಿತ್ತು. ಈ ಬಾರಿ ಕೂಡ ಅದೇ ತಂತ್ರವನ್ನು ರಾಜಕೀಯ ವಿರೋಧಿಗಳು ಅನುಸರಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮಾಮೂಲಿಯಂತೆ ಫೇಕ್ ನ್ಯೂಸ್ಗಳನ್ನು ಹೆಚ್ಚೆಚ್ಚು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಆರಂಭದಲ್ಲೇ ಸುಳ್ಳು ಸುದ್ದಿಗಳ ಮೂಲಗಳನ್ನು ಪತ್ತೆ ಹಚ್ಚಿ ಅವುಗಳನ್ನು ಬೇರು ಸಮೇತ ಕತ್ತರಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸೂಚಿಸಿದ್ದಾರೆ.
ಕೇರಳದಲ್ಲಿ ಜ್ವರ ಪ್ರಕರಣ ಹೆಚ್ಚಳ
ತಿರುವನಂತಪುರA, ಜೂ. ೨೦: ಕೇರಳದಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜನರು ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಂಗಳವಾರ ಸಲಹೆ ನೀಡಿದ್ದಾರೆ. ಪರಿಸ್ಥಿತಿಯ ನಿರಂತರ ನಿಗಾ ವಣೆಗಾಗಿ ಮೇಲ್ವಿಚಾರಣಾ ಘಟಕ ಶೀಘ್ರದಲ್ಲೇ ಕಾರ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ. ತಿರುವನಂತಪುರA ಮತ್ತು ಎರ್ನಾಕುಲಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಮತ್ತು ಇಲಿ ಜ್ವರ ಹರಡುತ್ತಿದ್ದು, ಮುಂಜಾಗ್ರತೆ ವಹಿಸಬೇಕು. ಈ ವರ್ಷದ ಜನವರಿ-ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು ಏಳು ಡೆಂಗ್ಯೂ ಸಾವುಗಳು, ಇಲಿ ಜ್ವರದಿಂದ ೨೭ ಮಂದಿ ಸಾವನ್ನಪ್ಪಿರುವುದಾಗಿ ಅವರು ಮಾಹಿತಿ ನೀಡಿದರು.
ಮಹದಾಯಿ:ಗೋವಾ ಸರ್ಕಾರಕ್ಕೆ ಮಹಾರಾಷ್ಟç ಸಿಎಂ ಬೆಂಬಲ
ಬೆಳಗಾವಿ, ಜೂ. ೨೦: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳ ನಂತರ ಮಹಾರಾಷ್ಟç ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹದಾಯಿ ನೀರು ತಿರುವು ವಿರುದ್ಧ ಗೋವಾದ ಬಿಜೆಪಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಭೆಯೊಂದರಲ್ಲಿ ಶಿಂಧೆ ಅವರು, ಕರ್ನಾಟಕವು ತನ್ನ ಕಳಸಾ-ಬಂಡೂರಿ ನಾಲಾ ಯೋಜನೆಯನ್ನು ಅನುಷ್ಠಾನಗೊಳಿಸಲು ಮಹದಾಯಿ ನೀರನ್ನು ತಿರುಗಿಸುವುದನ್ನು ತಡೆಯಲು ನಾವು ಗೋವಾ ಸರ್ಕಾರವನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. ಗೋವಾ ಸರ್ಕಾರ ಮಹದಾಯಿ ನದಿಯಿಂದ ಕರ್ನಾಟಕಕ್ಕೆ ನೀರು ಹರಿಸುವುದನ್ನು ತಡೆಯಲು ಸರ್ವ ಪ್ರಯತ್ನ ನಡೆಸುತ್ತಿದೆ.