ಆಫ್ರಿಕನ್ ದೈತ್ಯ ಶಂಕುಹುಳುಗಳು ಕಂಡುಬAದಿರುವ ಬೆಳ್ಳಾರಳ್ಳಿ ವ್ಯಾಪ್ತಿಯಲ್ಲಿ ಕಾಫಿ ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ಬೆಳೆಗಾರರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಶಂಕುಹುಳುಗಳನ್ನು ಹಿಡಿದು ಸಾಯಿಸುವುದೇ ಸದ್ಯಕ್ಕೆ ಉಳಿದಿರುವ ಪರಿಹಾರ. ಹುಳುಗಳನ್ನು ಆಕರ್ಷಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾಮೂಹಿಕ ನಿಯಂತ್ರಣ ಕ್ರಮಗಳನ್ನು ಕೈಗೊಂಡಾಗ ಮಾತ್ರ ಸಮಸ್ಯೆಯ ಸಂಕೋಲೆಯಿAದ ಹೊರಬರಬಹುದು. ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಡಾ. ಚಂದ್ರಶೇಖರ್ ಅವರ ಸೂಚನೆಯಂತೆ ಈಗಾಗಲೇ ಶಂಕುಹುಳು ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ನಿಯಂತ್ರಣದ ಬಗ್ಗೆ ಬೆಳೆಗಾರರಿಗೆ ಎಲ್ಲಾ ರೀತಿಯ ತರಬೇತಿ, ಮಾಹಿತಿ ನೀಡಲಾಗಿದೆ ಎಂದು ಜೆಎಲ್‌ಓ ರಂಜಿತ್ ತಿಳಿಸಿದ್ದಾರೆ.

ರಾಸಾಯನಿಕ ಬಳಕೆ: ಒಂದು ಏಕರೆ ಪ್ರದೇಶದಲ್ಲಿ ಹುಳುಗಳ ನಿಯಂತ್ರಣಕ್ಕೆ ೧೬೦-೨೪೦ ಗ್ರಾಂ ಲಾರ್ವಿನ್ ಪುಡಿಯನ್ನು ೬೦ ಕೆ.ಜಿ. ಅಕ್ಕಿ ತೌಡಿನೊಂದಿಗೆ ಮಿಶ್ರ ಮಾಡಿ ನಂತರ ೬ ಕೆ.ಜಿ. ಬೆಲ್ಲವನ್ನು ೫ ಲೀಟರ್ ಬಿಸಿ ನೀರಿನಲ್ಲಿ ಕರಗಿಸಿ, ಬೆಲ್ಲದ ದ್ರಾವಣಕ್ಕೆ ೩೦೦ ಮಿ.ಲೀ. ಹರಳೆಣ್ಣೆ ಮಿಶ್ರ ಮಾಡಿ, ಈ ದ್ರಾವಣವನ್ನು ನಿಧಾನವಾಗಿ ತೌಡು-ಲಾರ್ವಿನ್ ಮಿಶ್ರಣದೊಂದಿಗೆ ಮಿಶ್ರಮಾಡಬೇಕು. ನಂತರ ೧೫೦ ಗ್ರಾಂ ಮಿಶ್ರಣದ ಉಂಡೆಗಳನ್ನು ಪ್ರತಿ ೪ ಗಿಡಗಳ ಮಧ್ಯೆ ೪೦೦ ಸ್ಥಳಗಳಲ್ಲಿ ಇರಿಸಬೇಕು.

ಪಪ್ಪಾಯ-ರಾಸಾಯನಿಕ: ೧೬೦-೨೪೦ ಗ್ರಾಂ ಲಾರ್ವಿನ್ ಪುಡಿಯನ್ನು ಕತ್ತರಿಸಿದ ೬೦ ಕೆ.ಜಿ. ಪಪ್ಪಾಯ ಹಸಿ ಕಾಯಿ/ಎಲೆ/ಕಾಂಡ ಬೆರೆಸಿ ನಂತರ ೬ ಕೆ.ಜಿ. ಪುಡಿ ಬೆಲ್ಲವನ್ನು ಮಿಶ್ರಣ ಮಾಡಿ, ಒಂದು ಏಕರೆ ಪ್ರದೇಶಕ್ಕೆ ೧೫೦ ಗ್ರಾಂ ಮಿಶ್ರಣದ ತುಂಡುಗಳನ್ನು ೪೦೦ ಸ್ಥಳಗಳಲ್ಲಿ ಪ್ರತಿ ೪ ಗಿಡಗಳ ಮಧ್ಯೆ ಇಡಬೇಕು. ಶೇಖರಣೆಗೊಳ್ಳುವ ಶಂಕುಹುಳುಗಳನ್ನು ಮಣ್ಣಿನಲ್ಲಿ ಗುಂಡಿ ತೋಡಿ, ಅದರೊಳಗೆ ಹುಳುಗಳನ್ನು ಸುರಿದು ಉಪ್ಪು-ಸುಣ್ಣ ಹಾಕಿ ಮಣ್ಣು ಮುಚ್ಚಬೇಕು. ಹೀಗೆ ಮಾಡಿದ್ದಲ್ಲಿ ಒಂದೆರಡು ದಿನಗಳಲ್ಲಿ ಎಲ್ಲಾ ಹುಳುಗಳು ಸಾವನ್ನಪ್ಪುತ್ತವೆ.

ಅಥವಾ ಶೇ. ೫ರಷ್ಟು ಮೆಟಾಲ್ಡಿಹೈಡ್ ಹರಳುಗಳನ್ನು ಶಂಕುಹುಳುಗಳು ಹೆಚ್ಚು ಕಂಡುಬರುವ ಸ್ಥಳಗಳಲ್ಲಿ-ಗಿಡಗಳ ಬುಡದಲ್ಲಿ ಹರಡಬೇಕು ಎಂದು ಕಾಫಿ ಮಂಡಳಿಯ ತಂತ್ರಜ್ಞರು ಸಲಹೆ ನೀಡಿದ್ದಾರೆ.

ಇದೀಗ ತೇವಾಂಶ ಕಡಿಮೆ ಇರುವ ಹಿನ್ನೆಲೆ ಹೆಚ್ಚಿನ ಹುಳುಗಳು ಹೊರಗೆ ಬರುತ್ತಿಲ್ಲ. ಮಳೆ ಆರಂಭವಾಗಿ ತೇವಾಂಶ ಅಧಿಕವಾದಂತೆ ಹುಳುಗಳು ಮೇಲೆ ಬಂದು ಹಸಿರನ್ನು ತಿನ್ನಲು ಪ್ರಾರಂಭಿಸುತ್ತವೆ. ಬೆಳೆಗಾರರು ಸಾಮೂಹಿಕವಾಗಿ ನಿಯಂತ್ರಣ ಕ್ರಮ ಕೈಗೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು. ಈ ಬಗ್ಗೆಯೂ ಮಂಡಳಿಯಿAದ ತಿಳುವಳಿಕೆ ನೀಡಲಾಗುತ್ತಿದೆ ಎಂದು ಕಾಫಿ ಮಂಡಳಿಯ ಅಧಿಕಾರಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.