ವೀರಾಜಪೇಟೆ, ಜೂ. ೨೦: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದರು. ಈ ಸಂದರ್ಭ ವೈದ್ಯಾಧಿಕಾರಿ ಗೈರಾಗಿರುವುದು ಅಸಮಾಧಾನಕ್ಕೆ ಕಾರಣವಾಯಿತು.

ಪಾಲಿಬೆಟ್ಟ ಗ್ರಾಮದ ಸ್ವಸಹಾಯ ಗುಂಪು ತರಬೇತಿ ಕೇಂದ್ರದಲ್ಲಿ ಕಾರ್ಯಕರ್ತರ ಮತು ಸಾರ್ವಜನಿಕರ ಸಭೆಯನ್ನು ನಡೆಸಿದ ನಂತರದಲ್ಲಿ ಶಾಸಕರು ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿದರು. ವೈದ್ಯರಾದ ಡಾ. ಬಸವಣ್ಣ ಅವರಿಂದ ಕೇಂದ್ರ ಬಗ್ಗೆ ಮಾಹಿತಿ ಪಡೆದರು.

ಈ ವೇಳೆಯಲ್ಲಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ವೈದ್ಯಾಧಿಕಾರಿ ಡಾ. ಲೋಹಿತ್ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಗೈರಾಗಿರುವುದು ಬೆಳಕಿಗೆ ಬಂತು.

ಗೈರುಹಾಜರಾದರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳದಲ್ಲಿದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿ ಆ್ಯಂಬ್ಯುಲೆನ್ಸ್ ಇಲ್ಲದಿರುವುದು, ಕೇಂದ್ರದಲ್ಲಿ ನುರಿತ ತಾಂತ್ರಿಕ ಅಧಿಕಾರಿ ಇಲ್ಲದ ಬಗ್ಗೆ, ಎಕ್ಸರೆ ಯಂತ್ರ ತಾಂತ್ರಿಕ ದೋಷಗಳಿಂದ ಸ್ಥಗಿತಗೊಂಡಿರುವುದು ಡಿ.ಗ್ರೂಪ್ ನೌಕರರ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಸ್ಥಳೀಯರು ಪರಿಹಾರಕ್ಕೆ ಶಾಸಕರ ಗಮನ ಸೆಳೆದರು. ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಮುಖ್ಯ ಆರೋಗ್ಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಮತ್ತು ತಾಂತ್ರಿಕ ಅಧಿಕಾರಿಗಳು ಇಲ್ಲದಿರುವ ಬಗ್ಗೆ ಜಿಲ್ಲಾ ಅರೋಗ್ಯ ಅಧಿಕಾರಿಗಳಿಗೆ ಮಾಹಿತಿ ಬಯಸಿ ಪತ್ರ ಬರೆಯುತ್ತೇನೆ. ಕ್ರಮ ಜರುಗಿಸಲು ಮುಂದಾಗುತ್ತೇನೆ ಎಂದು ಎಚ್ಚರಿಸಿದರು.