ಕೂಡಿಗೆ, ಜೂ. ೧೯: ಕಪ್ಪೆಯನ್ನು ನುಂಗಲು ಹೋಗಿ ‘ಪ್ಲಾಸ್ಟಿಕ್ ಕವರ್’ ಸಹಿತ ನುಂಗಿ ನರಳಾಡುತ್ತಿದ್ದ ಹಾವನ್ನು ಉರಗ ರಕ್ಷಕರೊಬ್ಬರು ರಕ್ಷಿಸಿದ ಘಟನೆ ಗೊಂದಿಬಸವನ ಹಳ್ಳಿಯಲ್ಲಿ ನಡೆದಿದೆ.

ಗೊಂದಿಬಸವನಹಳ್ಳಿ ಗ್ರಾಮದ ಶಶಿ ಎಂಬವರ ಮನೆಯಲ್ಲಿ ಅಡಗಿದ್ದ ನಾಗರಹಾವು ಪತ್ತೆಯಾಗಿದೆ. ಮನೆಯವರು ಉರಗ ರಕ್ಷಕ ಗಫೂರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಅವರು ನಾಗರಹಾವನ್ನು ಸೆರೆಹಿಡಿದ ಸಂದರ್ಭ ಹಾವಿನ ಗಂಟಲು ದಪ್ಪವಿರುವುದನ್ನು ಗಮನಿಸಿದ್ದಾರೆ.

ತಕ್ಷಣ ಎಚ್ಚೆತ್ತ ಉರಗ ರಕ್ಷಕ ಗಫೂರ್, ಹಾವಿಗೆ ನೀರನ್ನು ಕುಡಿಸಿ ವಾಂತಿ ಮಾಡಿಸಿ ಪ್ಲಾಸ್ಟಿಕ್ ಕವರ್ ಸಹಿತ ಕಪ್ಪೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ನಾಗರಹಾವನ್ನು ಸಮೀಪದ ಯಡವನಾಡು ಅರಣ್ಯಕ್ಕೆ ಬಿಡಲಾಯಿತು. -ನಾಗರಾಜಶೆಟ್ಟಿ