ಚೆಯ್ಯಂಡಾಣೆ, ಜೂ. ೨೦: ನರಿಯಂದಡ ಗ್ರಾಮ ಪಂಚಾಯಿತಿಯ ವತಿಯಿಂದ ನೂತನವಾಗಿ ೪೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮ ಪಂಚಾಯಿತಿಯ ಕಾರ್ಯಾಲಯವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.

ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಇಡೀ ದೇಶಾದ್ಯಂತ ಪಂಚಾಯಿತಿಗಳಿಗೆ ಒಂದು ಸುಸಜ್ಜಿತವಾದ ಕೇಂದ್ರಗಳನ್ನು ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ನರೇಗಾ ಯೋಜನೆಯನ್ನು ೨೦೦೮ರಲ್ಲಿ ಜಾರಿಗೆ ತರಲಾಯಿತು. ಅಂದು ಅನುದಾನ ೧೧.೨೫ ಲಕ್ಷ ರೂ. ಮಾತ್ರ ಇತ್ತು. ಇದರಲ್ಲಿ ಒಂದು ಪಂಚಾಯಿತಿ ಕೇಂದ್ರವನ್ನು ನಿರ್ಮಾಣ ಮಾಡುವುದು ಬಹಳ ಕಷ್ಟವಾಗಿತ್ತು. ಹಳೇ ಕಟ್ಟಡಗಳಲ್ಲಿ, ಬಾಡಿಗೆ ಕಟ್ಟಡಗಳಲ್ಲಿ ಗ್ರಾ.ಪಂ. ಚಟುವಟಿಕೆಗಳು ನಡೆಯುತ್ತಿದ್ದವು. ರಾಜ್ಯ ಸರಕಾರ ಬಾಪೂಜಿ ಸೇವಾ ಕೇಂದ್ರ ಮೂಲಕ ೧೫೦ಕ್ಕೂ ಹೆಚ್ಚು ಸೇವಾ ಕೇಂದ್ರಗಳನ್ನ ಪಂಚಾಯಿತಿಯಲ್ಲೇ ಕೊಡಬೇಕು ಎಂಬ ತೀರ್ಮಾನ ಮಾಡಿದಾಗಲು ಕೂಡ ಸುಸಜ್ಜಿತವಾದ ಕಟ್ಟಡದ ಕೊರತೆ ಇತ್ತು. ಇಂಟರ್‌ನೆಟ್ ಅಲಭ್ಯತೆ ಕೂಡ ಇತ್ತು. ೨೦೧೪ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದ ನಂತರ ಪಂಚಾಯಿತಿಗಳಿಗೆ ಕೊಡುವ ಅನುದಾನವನ್ನು ಏರಿಸಲಾಯಿತು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವೀರಾಜಪೇಟೆ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅಧ್ಯಕ್ಷರ ಕೊಠಡಿ ಉದ್ಘಾಟಿಸಿ ಮಾತನಾಡಿ, ಸಂವಿಧಾನದ ೭೨ನೇ ತಿದ್ದುಪಡಿಯ ಮೂಲಕ ಗ್ರಾಮ ಪಂಚಾಯಿತಿಯನ್ನು ೧೯೯೨ರಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್ ಸಂವಿಧಾನಿಕ ಉದ್ದೇಶ ಎಂಬ ತಿದ್ದುಪಡಿಯ ಮೂಲಕ ತಂದರು.

ಈ ತಿದ್ದುಪಡಿ ಜಾರಿಗೆ ಬರದಿದ್ದಲ್ಲಿ ಇಂದು ಗ್ರಾ.ಪಂ. ಸ್ವಂತ ಕಟ್ಟಡಗಳು ಇರುತ್ತಿರಲಿಲ್ಲ, ಅಧಿಕಾರ ವಿಕೇಂದ್ರಿಕರಣ ಸಾಧ್ಯವಾಗುತ್ತಿರಲಿಲ್ಲ. ಗ್ರಾಮ ಪಂಚಾಯಿತಿಗಳಿಗೂ ಬಹಳ ದೊಡ್ಡ ಜವಾಬ್ದಾರಿ ಇದೆ. ನೇರವಾಗಿ ಜನರಿಗೆ ಮುಟ್ಟುವಂತಹ ಕಾರ್ಯಕ್ರಮಗಳು ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ಹೊಣೆಗಾರಿಕೆ ಮರೆಯುವಂತಿಲ್ಲ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಯ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವುದು ದೇಶದ ಅಭಿವೃದ್ಧಿಯ ಸಂಕೇತ, ಕಡು ಬಡವರು ವಿದ್ಯಾವಂತರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಹಲವಾರು ಯೋಜನೆಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಎರಡೂವರೆ ವರ್ಷದ ಆಡಳಿತ ತೃಪ್ತಿ ತಂದಿದೆ.

ಗ್ರಾಮ ಪಂಚಾಯಿತಿಯ ೧೫ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಹಿಂದಿನ ಶಾಸಕರು, ಕಂದಾಯ ಇಲಾಖೆಯವರು, ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸಹಕಾರ ಸ್ಮರಿಸಿದರು.

ಕಟ್ಟಡ ನಿರ್ಮಿಸಿದ ಗುತ್ತಿಗೆದಾರ ಸಬಿಲ್ ಅವರನ್ನು ಇದೇ ಸಂದರ್ಭದಲ್ಲಿ ಸಂಸದರು ಸನ್ಮಾನಿಸಿದರು.

ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಆಕಾಶ್ ಎಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶೇಖರ್, ಯೋಜನಾ ನಿರ್ದೇಶಕರಾದ ಜಗದೀಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ ಎಸ್ ಪುಷ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಪಮಿಕ ಹಾಗೂ ನವಾನಿ, ಸ್ವಾಗತವನ್ನು ಕೋಡಿರ ವಿನೋದ್ ನಾಣಯ್ಯ ಹಾಗೂ ವಂದನೆಯನ್ನು ದ್ವಿತೀಯ ದರ್ಜೆಯ ಲೆಕ್ಕ ಸಹಾಯಕ ಬಿದ್ದಪ್ಪ ನೆರವೇರಿಸಿದರು. -ಅಶ್ರಫ್