(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜೂ. ೧೮: ಜಿಲ್ಲೆ ಯಾದ್ಯಂತ ಕೋಳಿ ಮಾಂಸ ದರ ಗಗನಕ್ಕೇರಿದ್ದು, ಚಿಕನ್‌ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದರ ಏರಿಕೆ ಯಿಂದ ಗ್ರಾಹಕರು ಮಾಂಸವನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದು, ದರ ಏರಿಕೆಯಿಂದ ಕೋಳಿ ಮಾಂಸ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ೨೫೦ ರಿಂದ ೨೮೦ ವರೆಗೆ ಕೋಳಿ ಮಾಂಸ ದರ ತಲುಪಿದೆ. ಕೆಜಿ ಯೊಂದಕ್ಕೆ ೧೫೦ ರಿಂದ ೧೬೦ ರೂ ಇದ್ದ ಕೋಳಿ ಮಾಂಸದ ದರ ದಿಢೀರ್ ಹೆಚ್ಚಳವಾಗಿದೆ.

ಮೂರು ವರ್ಷಗಳ ಹಿಂದೆ ೨೨೦ ರೂವರೆಗೆ ಕೋಳಿ ಮಾಂಸದ ದರ ಹೆಚ್ಚಳವಾಗಿತ್ತು. ಆದರೆ ಮಳೆಗಾಲದಲ್ಲೇ ಕೋಳಿ ಮಾಂಸ ದರ ಏರಿಕೆ ಖಂಡಿದೆ. ೫ ರೂ ಇದ್ದ ಮೊಟ್ಟೆಯ ಬೆಲೆ ೬.೫ ರೂಗಳಿಗೆ ತಲುಪಿದೆ. ಮೊಟ್ಟೆಯೊಂದಕ್ಕೆ ೧.೫ ರೂ ಹೆಚ್ಚಳವಾಗಿದೆ. ಕೋಳಿ ಮಾಂಸ ವ್ಯಾಪಾರಿಗಳಿಗೆ ಪ್ರತಿ ಕೆ.ಜಿಗೆ ೧೬೫ ದರದಲ್ಲಿ ಕೋಳಿ ಸಿಗುತ್ತಿದೆ. ೧೦೦ ರಿಂದ ೧೨೦ ರೂ ಪ್ರತಿ ಕೆ.ಜಿಗೆ ಸಿಗುತ್ತಿದ್ದ ಫಾರಮ್ ಕೋಳಿಗಳ ಬೆಲೆ ಇದೀಗ ೧೬೫ ರೂ ತಲುಪಿದೆ. ಮಾಮೂಲಿಯಾಗಿ ಕೋಳಿ ವ್ಯಾಪಾ ರಿಗಳಿಗೆ ದಿನದ ಕೋಳಿ ಮಾರುಕಟ್ಟೆಯ ಪೇಪರ್ ದರದಲ್ಲಿ ರೂ. ೫ ಕಡಿಮೆ ಮಾಡಿ ಪ್ರತಿ ಕೆ.ಜಿಗೆ ಫಾರಮ್ ಅವರು ನೀಡುತ್ತಿದ್ದರು.

ಇದೀಗ ಪೇಪರ್ ದರದಲ್ಲಿ ೧೫ ರೂ ಹೆಚ್ಚಳ ಮಾಡಿದ್ದಾರೆ. ಶನಿವಾರ ಕೋಳಿ ರಿಟೇಲ್ ದರ ೧೬೩ ರೂ ತಲುಪಿದೆ. ಗ್ರಾಹಕರಿಗೆ ಪ್ರತೀ ಕೆ.ಜಿಗೆ ವಿಥ್ ಸ್ಕಿನ್ ೨೫೦ ರಿಂದ ೨೮೦ ಹಾಗೂ ವಿಥೌಟ್ ಸ್ಕಿನ್ ೩೦೦ ರಿಂದ ೩೨೦ ರೂವರೆಗೆ ಕೋಳಿ ಮಾಂಸ ಮಾರಾಟ ಮಾಡಲಾಗುತ್ತಿದೆ.

ಕುಸಿತಗೊಂಡ ವ್ಯಾಪಾರ!

ಕೋಳಿ ಮಾಂಸದ ದರ ೨೮೦ರ ಗಡಿ ತಲುಪಿದೆ. ಬೆಲೆ ಏರಿಕೆಯಿಂದ ಕೋಳಿ ಮಾಂಸ ವ್ಯಾಪಾರ ಕುಸಿತಗೊಂಡಿದೆ. ಸುಂಟಿಕೊಪ್ಪದಲ್ಲಿ ೧೦ ರಿಂದ ೧೨ ಕೋಳಿ ಮಾಂಸದ ಅಂಗಡಿಗಳು ಇದ್ದು, ಪ್ರತಿ ನಿತ್ಯ ೫ ರಿಂದ ೭ ಬಾಕ್ಸ್ ಗಳಷ್ಟು ಕೋಳಿಗಳ ವ್ಯಾಪಾರ ನಡೆಯುತ್ತಿತ್ತು. ಆದರೆ ಇದೀಗ ಬೆಲೆ ಏರಿಕೆಯಿಂದ ದಿನಕ್ಕೆ ಒಂದು ಬಾಕ್ಸ್ ಕೋಳಿ ವ್ಯಾಪಾರ ಕೂಡ ನಡೆಯುತ್ತಿಲ್ಲ.

ವ್ಯಾಪಾರಿಗಳು ಪೈಪೋಟಿಯಿಂದ ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಕಡಿಮೆ ದರದಲ್ಲಿ ಗ್ರಾಹಕರಿಗೆ ಕೋಳಿ ಮಾಂಸ ಸಿಗುತ್ತಿದ್ದ ಸುಂಟಿಕೊಪ್ಪ ಗ್ರಾಮದಲ್ಲಿ ಇದೀಗ ಕೋಳಿ ಮಾಂಸ ದರ ೨೫೦ಕ್ಕೆ ತಲುಪಿದೆ. ಅದಲ್ಲದೇ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ೨೦೦ ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಇದರ ಕಾರಣದಿಂದಲೂ ಗ್ರಾಹಕರು ಚಿಕನ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಏರಿಕೆಯಿಂದ ಚಿಕನ್ ಪ್ರಿಯರು ಹಸಿ ಮೀನು ಖರೀದಿಸುತ್ತಿದ್ದಾರೆ. ಕೋಳಿ ಮಾಂಸ ಬೆಲೆ ಏರಿಕೆ ಕೋಳಿ ಮಾಂಸ ವ್ಯಾಪಾರಿಗಳು ದೊಡ್ಡ ಹೊಡೆತ ಕೊಟ್ಟರೆ, ಮತ್ತೊಂದೆಡೆ ಕೋಳಿ ಮಾಂಸ ಬೆಲೆ ಏರಿಕೆಯಿಂದ ಮೀನು ವ್ಯಾಪಾರ ಬಲು ಜೋರಾಗಿ ನಡೆಯುತ್ತಿದೆ.

ಅಧಿಕ ಉಷ್ಣಾಂಶ, ಕೋಳಿಗಳ ಆಹಾರದ ಬೆಲೆ ಏರಿಕೆ!

ಅಧಿಕ ಉಷ್ಣಾಂಶದಿAದ ಕೋಳಿಗಳ ಉತ್ಪಾದನೆ ಕುಂಠಿತ ಹಾಗೂ ಕೋಳಿಗಳಿಗೆ ಆಹಾರವಾಗಿ ನೀಡುವ ಜೋಳದಿಂದ ತಯಾರಾಗುವ ಕೋಳಿಗಳಿಗೆ ಅತೀ ಹೆಚ್ಚಾಗಿ ನೀಡುವ ಫೀಡ್ ದರದಲ್ಲಿ ಏರಿಕೆಯಾಗಿರುವುದರಿಂದ ಕೋಳಿ ಮಾಂಸದ ದರ ಏರಿಕೆಯಾಗಿದೆ. ಕೋಳಿಗಳಿಗೆ ಆಹಾರವಾಗಿ ನೀಡುವ ೨೫ ಕೆ.ಜಿ ಚೀಲದ ಫೀಡ್ ಬೆಲೆ ೨೫೦೦ ರೂ. ತಲುಪಿದೆ. ಈ ಹಿಂದೆ ೨೫ ಕೆ.ಜಿ ಕೋಳಿ ಫೀಡಿಗೆ ೪೫೦ ರೂ/ ಇತ್ತು ಆದರೆ ಇದೀಗ ೨೫೦೦ ರೂ. ತಲುಪಿದೆ. ಅದಲ್ಲದೇ ಕೋಳಿಗಳಿಗೆ ನೀಡುವ ಸೋಯಾ, ಎಣ್ಣೆಕಾಳು ಹಾಗೂ ಔಷಧಿಗಳ ಬೆಲೆ ಗಣ ನೀಯವಾಗಿ ಏರಿಕೆಯಾಗಿರುವುದರಿಂದ ಕೋಳಿ ಮಾಂಸ ದರದಲ್ಲಿ ಏರಿಕೆ ಕಂಡಿದೆ.

ಮಳೆಗಾಲ ಆರಂಭಗೊAಡರೆ, ಕೋಳಿ ಮಾಂಸ ದರ ಇಳಿಕೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕೋಳಿ ಮಾಂಸ ದರ ಚಿಕನ್ ಪ್ರಿಯರಿಗೆ ಬರೆ ಎಳೆದಂತಾಗಿದೆ. ಕೋಳಿ ಮಾಂಸದ ಬೆಲೆ ದಿಢೀರ್ ಏರಿಕೆಯಾಗಿರುವುದರಿಂದ, ಹೋಟೆಲ್‌ಗಳಲ್ಲಿ ಕೋಳಿ ಮಾಂಸದ ಖಾದ್ಯಗಳ ಬೆಲೆ ಕೂಡ ಏರಿಕೆಯಾಗುವ ಸಾಧ್ಯತೆ ಕೂಡ ಇದೆ. ಬಾಯ್ಲರ್ ಕೋಳಿ ಮರಿಗಳ ಬೆಳವಣಿಗೆಗೆ ೪೨ ದಿನಗಳು ಬೇಕಾಗುತ್ತದೆ. ಅಧಿಕ ಉಷ್ಣಾಂಶದಿAದ ನೀರಿನ ಅಭಾವವುಂಟಾಗಿ ಬಹುತೇಕ ಬಾಯ್ಲರ್ ಕೋಳಿಗಳ ಸಾಕಾಣಿಕೆ ಮಾಡುವ ಫಾರಮ್‌ಗಳಲ್ಲಿ ಕೋಳಿ ಮರಿಗಳನ್ನು ಸಾಕಿಲ್ಲ. ಮಳೆಗಾಲ ಪ್ರಾರಂಭಗೊAಡರೆ, ನೀರಿನ ಅಭಾವ ಕಡಿಮೆಯಾಗುತ್ತದೆ. ಇದರಿಂದ ಕೋಳಿಮರಿಗಳ ಸಾಕಾಣಿಕೆ ಮಾಡಬಹುದಾಗಿದೆ. ಕೋಳಿ ಸಾಕಾಣಿಕೆ ಶೆಡ್‌ಗಳಲ್ಲಿ ನೀರಿನ ಅಭಾವ ಎದುರಾದರೆ ಕೋಳಿ ಮರಿಗಳು ಸಾವನ್ನಪ್ಪುತ್ತದೆ. ಈ ಕಾರಣದಿಂದ ಬಹುತೇಕ ಫಾರಮ್‌ಗಳಲ್ಲಿ ಕೋಳಿ ಮರಿಗಳ ಸಾಕಾಣಿಕೆ ನಿಲ್ಲಿಸಿದ್ದಾರೆ. ಇದರಿಂದ ಕೋಳಿ ಮಾಂಸ ದರದಲ್ಲಿ ದಿಢೀರ್ ಏರಿಕೆ ಕಂಡಿದೆ.

ಸಾಮಾನ್ಯವಾಗಿ ಮದುವೆ ಹಾಗೂ ಸಮಾರಂಭಗಳಲ್ಲಿ ಅತೀ ಹೆಚ್ಚಾಗಿ ಕೋಳಿ ಮಾಂಸವನ್ನು ಅಡುಗೆಗೆ ಬಳಸುತ್ತಾರೆ. ಕೋಳಿ ಮಾಂಸದ ವ್ಯಾಪಾರಿಗಳು ಕಡಿಮೆ ದರದಲ್ಲಿ ಕೋಳಿ ಮಾಂಸ ನೀಡುತ್ತಾರೆ. ಪೇಪರ್ ದರದಲ್ಲಿ ೧೫ ರಿಂದ ೨೦ ರೂ ಹೆಚ್ಚಳ ಮಾಡಿ, ರಿಟೇಲ್ ದರದಲ್ಲೇ ಮದುವೆ, ಸಮಾರಂಭ ಹಾಗೂ ದಿನನಿತ್ಯ ಹೋಟೆಲ್‌ಗಳಿಗೆ ಕೋಳಿ ಮಾಂಸ ನೀಡುತ್ತಾರೆ. ಆದರೆ ಇದೀಗ ಮದುವೆ ಸಮಾರಂಭಗಳಿಗೆ ಚಿಕನ್ ಖರೀದಿಸುವವರಿಗೆ ಚಿಕನ್ ಬೆಲೆ ಏರಿಕೆಯಿಂದ ದೊಡ್ಡ ಹೊಡೆತ ಬಿದ್ದಿದೆ. ಈ ಹಿಂದೆ ಮದುವೆ ಕಾರ್ಯಗಳಿಗೆ ಕೆ.ಜಿಯೊಂದಕ್ಕೆ ೧೫೦ ರೂ ಗಳಿಗೆ ಚಿಕನ್ ಸಿಗುತ್ತಿತ್ತು. ಆದರೆ ಇದೀಗ ಮದುವೆ ಕಾರ್ಯಕ್ರಮಗಳು ನಡೆಸುವವರು ಕೆ.ಜಿಯೊಂದಕ್ಕೆ ೨೨೦ ರಿಂದ ೨೪೦ ರೂ ನೀಡಿ ಚಿಕನ್ ಖರೀದಿಸುತ್ತಿದ್ದಾರೆ.