ಸೋಮವಾರಪೇಟೆ, ಜೂ. ೧೯ : ಇತ್ತೀಚಿನ ಒಂದೆರಡು ದಶಕಗಳಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರ್ಪಡೆಗೊಳಿಸಲು ಪೋಷಕರು ದುಂಬಾಲು ಬೀಳುತ್ತಿದ್ದು, ಮಕ್ಕಳು ಎಳೆಯ ವಯಸ್ಸಿನಿಂದಲೇ ಇಂಗ್ಲೀಷ್‌ನಲ್ಲಿ ಮಾತನಾಡಬೇಕೆಂಬ ಹಂಬಲ ಹೊಂದುತ್ತಿದ್ದಾರೆ. ಪರಿಣಾಮ ಸರ್ಕಾರಿ ಶಾಲೆಗಳು ಹಾಜರಾತಿಯ ಕೊರತೆಯಿಂದ ನಲುಗುತ್ತಿದ್ದರೆ, ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಏರಿಕೆಯಾಗುತ್ತಿದೆ.

ಈ ನಡುವೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯೊಂದು ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಸ್ಪೋಕನ್ ಕೋರ್ಸ್ ಆರಂಭಿಸಿದ್ದು, ಖಾಸಗಿ ಶಾಲೆಯ ಮೇಲಿನ ಪೋಷಕರ ವ್ಯಾಮೋಹಕ್ಕೆ ತಡೆ ಹಾಕುವಲ್ಲಿ ಪ್ರಯತ್ನ ನಡೆಸಿದೆ. ಜಿಲ್ಲೆಯ ಮಟ್ಟಿಗೆ ಪ್ರಥಮ ಪ್ರಯತ್ನವೆಂಬAತೆ ಪಟ್ಟಣ ಸಮೀಪದ ಮಸಗೋಡು ಮುಖ್ಯ ಗ್ರಾಮಕ್ಕೆ ಒಳಪಡುವ ತಣ್ಣೀರುಹಳ್ಳ ಉಪ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಸ್ಪೋಕನ್ ಕೋರ್ಸ್ ಆರಂಭಗೊAಡಿದೆ.

ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ೭ನೇ ತರಗತಿವರೆಗೆ ೩೦ ವಿದ್ಯಾರ್ಥಿಗಳಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮಾತನಾಡುವ ಶಿಕ್ಷಣವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿದಿನ ೩.೩೦ ರಿಂದ ೪.೩೦ರವರೆಗೆ ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಜ್ಞಾನ ನೀಡಲಾಗುತ್ತಿದೆ.

೧-೪ನೇ ತರಗತಿ ಮಕ್ಕಳಿಗೆ ಚಟುವಟಿಕೆ ಆಧಾರಿತವಾಗಿ ಇಂಗ್ಲೀಷ್ ಕಲಿಕೆ, ೫-೭ರ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಕೆಗೆ ಶಿಕ್ಷಕರು ಕ್ರಮ ಕೈಗೊಂಡಿದ್ದಾರೆ. ಶಾಲಾ ದಾಖಲಾತಿ, ಹಾಜರಾತಿ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಯ ಬಗ್ಗೆ ಗ್ರಾಮಸ್ಥರಲ್ಲಿ ಒಲವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಶಾಲಾ ಶಿಕ್ಷರಾಗಿರುವ ಕೆ.ಜಿ. ನಾಗೇಂದ್ರ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.

ಪ್ರಸ್ತುತ ಶಾಲೆಯಲ್ಲಿ ಓರ್ವ ಅತಿಥಿ ಶಿಕ್ಷಕಿ ಸೇರಿದಂತೆ ಮೂವರು ಶಿಕ್ಷಕರಿದ್ದು, ಮಕ್ಕಳ ಕಲಿಕಾ ಗುಣಮಟ್ಟ, ದಕ್ಷತೆಯನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ತಣ್ಣೀರುಹಳ್ಳ, ವಳಗುಂದ, ಮಸಗೋಡು ಭಾಗದಲ್ಲಿರುವ ಏಕೈಕ ಸರ್ಕಾರಿ ಶಾಲೆ ಇದಾಗಿದ್ದು, ಬಹುತೇಕ ಬಡ ಕುಟುಂಬದ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದಾರೆ.

ಸರ್ಕಾರಿ ಶಾಲೆಯ ಮಕ್ಕಳೂ ಸಹ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಕಡಿಮೆಯೇನಿಲ್ಲ ಎಂಬುದನ್ನು ನಿರೂಪಿಸುವ ಸವಾಲನ್ನು ಶಿಕ್ಷಕರು ಸ್ವೀಕರಿಸಿದ್ದಾರೆ. ಖಾಸಗಿ ಶಾಲೆಯ ವಿದ್ಯಾರ್ಥಿಗಳು ಮಾತ್ರ ಇಂಗ್ಲೀಷ್‌ನಲ್ಲಿ ಮಾತನಾಡುತ್ತಾರೆ ಎಂಬ ನಂಬಿಕೆ ಗ್ರಾಮೀಣ ಭಾಗದ ಜನರಲ್ಲಿದ್ದು, ಇದನ್ನು ಹೋಗಲಾಡಿಸುವ ಪ್ರಯತ್ನಕ್ಕೆ ಶಿಕ್ಷಕ ಕೆ.ಜಿ. ನಾಗೇಂದ್ರ ಹಾಗೂ ಅತಿಥಿ ಶಿಕ್ಷಕಿ ವಿಮಲಾ ಅವರುಗಳು ಮುಂದಾಗಿರುವುದು ಸ್ಥಳೀಯರು ಮಾತ್ರವಲ್ಲದೆ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಶ್ಲಾಘನೆಗೆ ಪಾತ್ರವಾಗಿದೆ.

ಜಿಲ್ಲೆಯಲ್ಲಿ ಪ್ರಥಮವಾಗಿ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಗ್ರಾಮೀಣ ಭಾಗದ ಮಕ್ಕಳೂ ಸಹ ಎಳೆಯ ವಯಸ್ಸಿನಲ್ಲಿಯೇ ಆಂಗ್ಲ ಜ್ಞಾನ ಹೊಂದಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಪ್ರಯತ್ನ ಪ್ರಶಂಸನೀಯ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಸಿ. ತಿಮ್ಮಪ್ಪ ಅಭಿಪ್ರಾಯಿಸಿದ್ದಾರೆ.

ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸ್ಪೋಕನ್ ಇಂಗ್ಲೀಷ್ ತರಗತಿ ಪ್ರಾರಂಭದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಅವರು, ವಿನೂತನ ಪ್ರಯತ್ನಕ್ಕೆ ಶುಭಹಾರೈಸಿದ್ದಾರೆ. ತಣ್ಣೀರುಹಳ್ಳ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಸಂಜೆ ವೇಳೆಯಲ್ಲಿ ಮಕ್ಕಳಿಗೆ ಬಿಸ್ಕೆಟ್ ನೀಡಲು ಮುಂದೆ ಬಂದಿದ್ದಾರೆ. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಶಾಂತಮ್ಮ, ಎಸ್‌ಡಿಎಂಸಿ ಸದಸ್ಯ ಪ್ರದೀಪ್, ರಮೇಶ್, ಅಂಗನವಾಡಿ ಶಿಕ್ಷಕಿ ಕುಸುಮಾವತಿ, ಸಿಆರ್‌ಪಿ ಹೆಚ್.ಸಿ. ಆಶಾ ಸೇರಿದಂತೆ ಪೋಷಕರು, ಸಾರ್ವಜನಿಕರು ಉಪಸ್ಥಿತರಿದ್ದರು. - ವಿಜಯ್ ಹಾನಗಲ್