ಶ್ರೀಮಂಗಲ, ಜೂ. ೧೯: ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿ ಗ್ರಾಮದ ಕುಪ್ಪುಡಿರ ಪೊನ್ನು ಮುತ್ತಪ್ಪ ಹಾಗೂ ನಯನ ದಂಪತಿ ಪುತ್ರ ಪ್ರಖ್ಯಾತ್ ಚಿಣ್ಣಪ್ಪ (೨೧) ಮೃತಪಟ್ಟಿದ್ದಾರೆ.
ಸೋಮವಾರ ಮುಂಜಾನೆ ಸುಮಾರು ಮೂರುವರೆ ಗಂಟೆ ವೇಳೆಗೆ ಬನ್ನೇರುಘÀಟ್ಟ ದಾಸರಹಳ್ಳಿ ಮಾರ್ಗದಲ್ಲಿ ಪ್ರಖ್ಯಾತ್ ಚಿಣ್ಣಪ್ಪ ತನ್ನ ಸ್ನೇಹಿತರೊಂದಿಗೆ ಹೊಂಡಾ ಸಿಟಿ (ಕೆಎ೫೧ ಪಿ ೩೪೭೫) ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಲ್ಲಿಸಿದ್ದ ೨ ಕಾರು ಮತ್ತು ಬೈಕ್ಗೆ ಡಿಕ್ಕಿ ಹೊಡೆದು, ಸಮೀಪದ ಕಟ್ಟಡದ ಗೋಡೆಗೆ ಬಡಿದು ಮಗುಚಿಕೊಂಡಿದೆ. ಅಪಘಾತದ ಭೀಕರತೆ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಕಾರು ಇಂಜಿನ್, ಟೈರ್, ಇತರ ಭಾಗಗಳು ಬೇರ್ಪಟ್ಟಿದ್ದು ಅಪಘಾತದ ಭೀಕರತೆಯನ್ನು ತೋರಿಸುತ್ತಿದೆ.
ಪ್ರಖ್ಯಾತ್ ಚಿಣ್ಣಪ್ಪ ಬೆಂಗಳೂರಿನಲ್ಲಿ ಮನೆ ಮಾಡಿ ಇತರ ಸ್ನೇಹಿತರೊಂದಿಗೆ ವ್ಯಾಸಂಗ ಮಾಡುತ್ತಿದ್ದರು. ಪ್ರಖ್ಯಾತ್ ಚಿಣ್ಣಪ್ಪ ಆಚಾರ್ಯ ಕಾಲೇಜಿನಲ್ಲಿ ಅಂತಿಮ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಉತ್ತಮ ಶೂಟರ್ ಪ್ರತಿಭೆ ಆಗಿದ್ದ ಈತ ಬಿರುನಾಣಿ ಮತ್ತು ನೆಲಜಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು.
ಪ್ರಖ್ಯಾತ್ ಚಿಣ್ಣಪ್ಪ ಅವರ ತಂದೆ ಪೊನ್ನು ಮುತ್ತಪ್ಪ ಅವರು ಬಿರುನಾಣಿ ಮರೆನಾಡ್ ಕೊಡವ ಸಮಾಜದ ಅಧ್ಯಕ್ಷರಾಗಿದ್ದು, ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಸ್ವಗ್ರಾಮದಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು.
(ಮೊದಲ ಪುಟದಿಂದ)
ಕೊಡಗಿನ ಮತ್ತೋರ್ವ ಯುವಕನಿಗೆ ಗಂಭೀರ ಗಾಯ: ಅಪಘಾತ ಸಂದರ್ಭ ಪ್ರಖ್ಯಾತ್ ಚಿಣ್ಣಪ್ಪ ಅವರ ಕಾರಿನಲ್ಲಿ ಟಿ. ಶೆಟ್ಟಿಗೇರಿ ತಾವಳಗೇರಿ ಗ್ರಾಮದ ತಡಿಯಂಗಡ ಕರುಂಬಯ್ಯ -ಸೌಮ್ಯ ಅವರ ಪುತ್ರ ರಿಕಿತ್ ಇದ್ದು, ಅವರು ಗಾಯಗೊಂಡಿದ್ದು, ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೈಸೂರು ಮತ್ತು ಬೆಂಗಳೂರಿನ ಇಬ್ಬರು ಯುವಕರು ಅಪಘಾತ ವೇಳೆ ಇದ್ದು ಅವರು ಸಹ ಗಾಯಗೊಂಡು ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.