ಕಣಿವೆ, ಜೂ. ೧೮ : ಜಿಲ್ಲೆಯ ಬಹುತೇಕ ಗಿರಿಜನ ನಿವಾಸಿಗಳು ಇರುವ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಿಗೆ ದಾಖಲಾಗಿರುವ ಗಿರಿಜನ ಮಕ್ಕಳು ಶಾಲೆಗೆ ಸರಿಯಾಗಿ ಹೋಗುತ್ತಿಲ್ಲ. ದಿನದ ಬೆಳಗಾಯಿತೆಂದರೆ ಶಾಲೆಗೆ ಹೋಗಬೇಕೆಂಬ ಛಲ ಮಕ್ಕಳಿಗೂ ಇಲ್ಲ. ಶಾಲೆಗೆ ಕಳಿಸಿಯೇ ಕೂಲಿಗೆ ಹೋಗಬೇಕೆಂಬ ಹಂಬಲ ಮಕ್ಕಳ ಪೋಷಕರಿಗೂ ಇಲ್ಲ.
ಅಂಗನವಾಡಿ ಅಥವಾ ಶಾಲೆಗಳಿಂದ ನಮ್ಮ ಹೊಟ್ಟೆ ತುಂಬುತ್ತಾ... ಕೂಲಿ ಮಾಡದೆಯೇ ಕುಳಿತಲ್ಲಿ ನಮಗೆ ಹಣ ಸಿಗುತ್ತಾ ಎಂಬ ಬಹಳಷ್ಟು ಗಿರಿಜನ ಪೋಷಕರ ಉದಾಸೀನದಿಂದಾಗಿ ಮಕ್ಕಳು ಶಾಲೆಗೆ ಚಕ್ಕರ್ ಕೊಡುವಂತಾಗಿದೆ.
ಮಕ್ಕಳ ಬೇಸಿಗೆಯ ರಜಾ ದಿನಗಳು ಮುಗಿದು ಶಾಲೆಗಳು ಆರಂಭವಾಗಿ ಹಲವು ದಿನಗಳು ಕಳೆದರೂ ಕೂಡ ಈ ಮಕ್ಕಳು ರಜೆಯ ಮೂಡ್ನಿಂದ ಹೊರ ಬಂದಿಲ್ಲ. ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಜಲಾಶಯದ ಅನತಿ ದೂರದಲ್ಲಿರುವ ಕಟ್ಟೆ ಹಾಡಿಯಲ್ಲಿನ ಗಿರಿಜನ ಮಕ್ಕಳು ಶಾಲೆಗೆ ಹೋಗದೇ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಚಿತ್ರಣ ‘ಶಕ್ತಿ'ಗೆ ಕಂಡು ಬಂತು. ಹಾಡಿಗೆ ತೆರಳುತ್ತಿದ್ದಂತೆಯೇ ಶಾಲೆಯ ಶಿಕ್ಷಕರು ಬಂದರು ಎಂದು ಭಾವಿಸಿದ ಈ ಮಕ್ಕಳು ಆ ಮೂಲೆ ಈ ಮೂಲೆಗೆ ಓಡಿ ಹೋಗಿ ಅಡಗಿಕೊಂಡ ಪ್ರಸಂಗವೂ ನಡೆಯಿತು.
ಬಳಿಕ ಮಕ್ಕಳನ್ನು ಪುಸಲಾಯಿಸಿ ನಾವು ಮಾಸ್ಟರಲ್ಲ ಬನ್ನಿ ಎಂದ ಮೇಲೆ ಒಬ್ಬೊಬ್ಬರೇ ಒಂದೆಡೆ ಬಂದು ಸೇರಿದರು. ಬಳಿಕ ವಿಚಾರಿಸಿದಾಗ ಇಲ್ಲಿನ ಬಹುತೇಕ ಮಕ್ಕಳು ಯಡವನಾಡು ಆಶ್ರಮ ಶಾಲೆಗೆ ಸೇರಿಕೊಂಡಿರುವುದಾಗಿ ಕಂಡು ಬಂತು. ನಿತ್ಯವೂ ಹಗಲಿನಲ್ಲಿ ಕೂಲಿ ಮಾಡಿಕೊಂಡು, ಸಂಜೆ ಯಾಯಿತೆಂದರೆ ಮನೆಯಂಗಳದಲ್ಲಿ ಹರಟೆ ಹೊಡೆವ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಇಲ್ಲಿನ ಗಿರಿಜನ ಮಂದಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ ಮಕ್ಕಳೂ ಕೂಡ ತಮ್ಮಂತೆಯೇ ನತದೃಷ್ಟರನ್ನಾಗಿಸಲು ಹೊರಟ ಆ ಮುಗ್ಧತೆಗೆ ಏನು ಹೇಳಬೇಕೋ ಗೊತ್ತಿಲ್ಲ. ಗಿರಿಜನರ ಸಮಗ್ರ ಕಲ್ಯಾಣಕ್ಕಾಗಿ ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳು ಇದುವರೆಗೂ ಯಾರಿಗೆ ತಲುಪಿವೆ. ಯಾರಿಗೆ ಯೋಜನೆಗಳ ಲಾಭವಾಗಿದೆಯೋ ಗೊತ್ತಿಲ್ಲ.
ಸ್ವಾತಂತ್ರö್ಯ ಪೂರ್ವದಲ್ಲಿ ಇದ್ದಂತಹ ಅನಕ್ಷರಸ್ತ ಪೋಷಕರು ಈಗಲೂ ಕೂಡ ಹಾಡಿಗಳಲ್ಲಿ ಇರುವುದರಿಂದ ಅವರಿಗೆ ಸಮಗ್ರ ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಇತರೇ ಹಕ್ಕುಗಳನ್ನು ಪಡೆಯಬೇಕೆಂಬ ಕನಿಷ್ಟ ಪರಿಜ್ಞಾನ ಇದ್ದಂತಿಲ್ಲ. ಹಾಗಾಗಿ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಶಾಲೆಗೆ ಕಳಿಸಿ ಶಿಕ್ಷಣ ಕೊಡಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಶಿಕ್ಷಕರನ್ನು ದೂರುವಂತಿಲ್ಲ
ಶಾಲೆಗೆ ಬಾರದ ಮಕ್ಕಳನ್ನು ಮರಳಿ ಶಾಲೆಗೆ ತನ್ನಿ ಎಂಬ ಶಿಕ್ಷಣ ಇಲಾಖೆಯ ನಿಯಮ ಕಾಡಂಚಿನ ಪ್ರದೇಶಗಳ ಶಾಲಾ ಶಿಕ್ಷಕರನ್ನು ಹೈರಾಣಾಗಿಸಿದೆ.
ಅಂದರೆ ಶಾಲೆಗೆ ಬಾರದ ಮಕ್ಕಳನ್ನು ಹುಡುಕಿ ಸಂಬAಧಿಸಿದ ಶಾಲೆಗಳ ಶಿಕ್ಷಕರು ಹಾಡಿಗಳಿಗೆ ಹೊರಟಾಗ ಶಿಕ್ಷಕರ ಬರುವಿಕೆಯನ್ನು ಗಮನಿಸುವ ಮಕ್ಕಳು ಎದ್ವಾ ತದ್ವಾ - ಬಿದ್ದಾ ಬೀಳಾ ಓಡೋಡಿ ಕಾಡು ಸೇರುತ್ತವೆ. ಕೆಲವು ಮರಗಳನ್ನು ಏರುತ್ತವೆ.
ಈ ಸಂದರ್ಭ ಏನಾದರೂ ಅನಾಹುತಗಳೇನಾದರೂ ಘಟಿಸಿದಲ್ಲಿ ಮತ್ತದೇ ಶಿಕ್ಷಕರ ನೆಮ್ಮದಿ ಹಾಳಾಗುತ್ತದೆ. ಇಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದು ಅಕ್ಷರ ಕಲಿಸಬೇಕು. ಅತ್ತ ಶಿಕ್ಷಣ ಇಲಾಖೆಯ ನಿಯಮವನ್ನೂ ಪಾಲಿಸಬೇಕು. ಹಾಗಾಗಿ ಶಿಕ್ಷಕರ ಗೋಳು ಇಲ್ಲಿ ತಪ್ಪದ ನಿತ್ಯದ ಗೀಳಾಗಿ ಪರಿಣಮಿಸಿದೆ.
ಮಕ್ಕಳ ಗೈರು ಹಾಜರಿಗೆ ಇಲ್ಲಿ ಪೋಷಕರ ಅಸಹಕಾರ ಎದ್ದು ಕಾಣುತ್ತದೆ. ಬೆಳಗಾಯಿತೆಂದರೆ ಯಾರದ್ದೋ ತೋಟಗಳಿಗೆ ಕುಟುಂಬ ಸಹಿತ ಕೂಲಿಗೆ ತೆರಳುವ ಗಿರಿಜನ ಪೋಷಕರು ತಮ್ಮ ಮಕ್ಕಳಿಗೆ ಬುದ್ದಿ ಹೇಳಿ ಶಾಲೆಗೆ ಕಳಿಸುವ ಅಥವಾ ಸರ್ಕಾರ ಉಚಿತವಾಗಿ ತೆರೆದ ವಸತಿ ನಿಲಯಗಳಿಗೆ ಕಳಿಸುವಲ್ಲಿ ಮುಂದಾಗುತ್ತಿಲ್ಲ.
ಕೂಲಿ ಮೇಲಿನ ಅಕ್ಕರೆ ಶಾಲೆ ಮೇಲಿಲ್ಲ ಜಿಲ್ಲೆಯ ಹಲವು ಗಿರಿಜನ ಹಾಡಿಗಳಲ್ಲಿನ ಪೋಷಕರು ಅಪ್ಪ ಹಾಕಿದ ಆಲದ ಮರದ ಬುಡದಲ್ಲಿಯೇ ಇರಬೇಕು ಎಂಬ ಅಲಿಖಿತ ನಿಯಮವನ್ನು ತಮಗೆ ತಾವೇ ಹೇರಿಕೊಂಡು ಅವರಪ್ಪ ಅಮ್ಮ ಮಾಡುತ್ತಿದ್ದ ಕೂಲಿಯನ್ನು ಇವರೂ ಮಾಡುತ್ತಿದ್ದಾರೆ. ಹಾಗೆಯೇ ನಮ್ಮಂತೆಯೇ ನಮ್ಮ ಮಕ್ಕಳು ಕೂಡ ಕೂಲಿ ಮಾಡಿಯೇ ಜೀವಿಸಲಿ ಎಂದುಕೊAಡಿದ್ದಾರೆ.
ಹಾಗಾಗಿ ಬೆಳಗಾಯಿತೆಂದರೆ ತಾವು ತೋಟದ ಮಾಲೀಕನಿಗೆ ಸಕಾಲಕ್ಕೆ ಕೂಲಿಗೆ ಹೋಗುವ ಅಕ್ಕರೆಯನ್ನು ತಮ್ಮ ಮಕ್ಕಳನ್ನು ಸರಿಯಾದ ಸಮಯಕ್ಕೆ ಶಾಲೆಗೆ ಕಳಿಸುವಲ್ಲಿ ತೋರುತ್ತಿಲ್ಲ.
ಇನ್ನೂ ಕೆಲವು ಪೋಷಕರು ಕೂಲಿಯ ಹಣದ ಆಸೆಗೆ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ತಮ್ಮೊಡನೆ ಕೂಲಿಗೆ ಕರೆದೊಯ್ಯುವುದೂ ಕೂಡ ಉಂಟು ಎನ್ನುತ್ತಾರೆ ಸ್ಥಳೀಯರು.
ಪದವೀದರರಾಗಿಲ್ಲ ಏಕೆ ?
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಿರಿಜನರನ್ನು ಮುಖ್ಯವಾಹಿನಿಗೆ ತರಬೇಕೆಂಬ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಕಳೆದ ಅನೇಕ ದಶಕಗಳಿಂದ ಜಾರಿಗೆ ತರುತ್ತಿದ್ದರೂ ಕೂಡ ಇದುವರೆಗೂ ಗಿರಿಜನ ಹಾಡಿಯ ಮಕ್ಕಳು ಪದವೀದರರಾಗಿಲ್ಲ ಏಕೆ ?
ಒಂದೇ ಒಂದು ಹೆಣ್ಣು ಮಗು ಅಥವಾ ಗಂಡು ಮಕ್ಕಳು ಸರ್ಕಾರಿ ಅಧಿಕಾರಿಗಳಾಗಲೀ ಅಥವಾ ಕನಿಷ್ಟ ಸರ್ಕಾರಿ ಹುದ್ದೆಯನ್ನು ಅಲಂಕರಿಸಿಲ್ಲ ಏಕೆ? ಎಂಬ ಪ್ರಶ್ನೆಯೂ ಇಲ್ಲಿ ಏಳುತ್ತದೆ.
ಗಿರಿಜನರ ಕಲ್ಯಾಣಕ್ಕೆಂದೇ ಇರುವ ಗಿರಿಜನ ಇಲಾಖೆ, ಜಿಲ್ಲಾಡಳಿತ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಗಿರಿಜನ ವಾಸಿಗಳಿಗೆ ಸೂಕ್ತ ತಿಳುವಳಿಕೆ ನೀಡುವ ಮೂಲಕ ಗಿರಿಜನ ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಖಲಾಗುವಂತೆ ಮಾಡಬೇಕಿದೆ.
ಹಾಗೂ ಗಿರಿಜನ ವಾಸಿಗಳು ತಮ್ಮ ಮಕ್ಕಳನ್ನು ಅಂಗನವಾಡಿ ಅಥವಾ ಶಾಲೆಗಳಿಗೆ ಕಡ್ಡಾಯವಾಗಿ ಕಳಿಸದಿದ್ದಲ್ಲಿ ಅವರಿಗೆ ನೀಡುವ ಉಚಿತ ಮೊಟ್ಟೆ, ಧವಸ ಧಾನ್ಯ ಹಾಗೂ ಇತರೇ ಸೌಲಭ್ಯಗಳನ್ನು ಮೊಟಕುಗೊಳಿಸುವ ಎಚ್ಚರಿಕೆ ನೀಡುವ ಮೂಲಕವಾದರೂ ಶಾಲೆಗೆ ಮಕ್ಕಳನ್ನು ಸೆಳೆಯುವ ಕೆಲಸ ಮಾಡಬೇಕು. (ವರದಿ : ಕೆ.ಎಸ್.ಮೂರ್ತಿ)