ಮಡಿಕೇರಿ, ಜೂ. ೧೯: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿ ಇರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ಕಸಾಪ ತಾಲ್ಲೂಕು ಮತ್ತು ಜಿಲ್ಲಾ ಘಟಕಗಳ ವತಿಯಿಂದ ಕಳೆದ ವರ್ಷ ಹಮ್ಮಿಕೊಂಡಿದ್ದ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಲೆಕ್ಕಪತ್ರ ಮಂಡನೆ, ಗೌರಮ್ಮ ಕಸಾಪ ಜಿಲ್ಲಾ ಘಟಕದ ಸಣ್ಣ ಕಥೆಗಳ ಗೌರಮ್ಮ ಕಥಾ ಸ್ಪರ್ಧೆ, ದತ್ತಿ ಕಾರ್ಯಕ್ರಮಗಳ ಆಯೋಜನೆ ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಯಿತು.
ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ ನೀಡಿದ್ದು, ಆ ನಿಟ್ಟಿನಲ್ಲಿ ಮಳೆಗಾಲದ ನಂತರ ಗಡಿ ಭಾಗ ಕರಿಕೆ ಗ್ರಾಮದಲ್ಲಿ ‘ಗಡಿ ಉತ್ಸವ’ ಆಯೋಜಿಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಆರಂಭದಲ್ಲಿ ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಅವರು ಕಳೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯ ವರದಿ ಮಂಡಿಸಿದರು.
ಜಿಲ್ಲಾ ಮತ್ತು ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಲೆಕ್ಕಪತ್ರವನ್ನು ಕೂಡಲೇ ಆಡಿಟ್ ಮಾಡಿ ಒದಗಿಸಬೇಕು ಎಂದು ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಸಲಹೆ ಮಾಡಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಆದಷ್ಟು ಶೀಘ್ರ ಆಯೋಜಿಸುವಂತೆ ತಾಲೂಕು ಘಟಕದ ಅಧ್ಯಕ್ಷರಿಗೆ ತಿಳಿಸಿದರು.
ಕಸಾಪ ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಸೋಮವಾರಪೇಟೆ ತಾಲೂಕಿನ ಕಸಾಪ ಕಟ್ಟಡ ಸಂಬAಧ ಹಲವು ಸಲಹೆ ಮಾರ್ಗದರ್ಶನ ನೀಡಿದರು.
ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವುದರಿAದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡುವಂತೆ ಕಸಾಪ ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷರಾದ ನವೀನ್ ಅಂಬೆಕಲ್ಲು ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅದರಂತೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಿಡುಗಡೆಗೆ ಅನುಮೋದಿಸಲಾಯಿತು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್, ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಡಿ.ವಿಜೇತ್, ಡಿ.ಪಿ.ರಾಜೇಶ್, ಕೆ.ಎಸ್.ಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಹನಾ ಕಾಂತಬೈಲು, ಫ್ಯಾನ್ಸಿ ಮುತ್ತಣ್ಣ, ಎಚ್.ಎಸ್.ಪ್ರೇಮ್ ಕುಮಾರ್, ಚಂದ್ರಶೇಖರ್, ವೆಂಕಟನಾಯಕ ಇತರರು ಇದ್ದರು.