ಮಡಿಕೇರಿ, ಜೂ. ೧೭ : ಮಡಿಕೇರಿ ನಗರಸಭಾ ಆಡಳಿತ ಮಂಡಳಿಯ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಪ್ರಮುಖವಾದ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದ ಅವಧಿ ಈಗಾಗಲೇ ಮುಕ್ತಾಯವಾಗಿದ್ದು, ಆ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಐವರು ಸದಸ್ಯರುಗಳ ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿದೆ.

ನಗರಸಭೆಯ ೨೩ ವಾರ್ಡ್ಗಳ ಪೈಕಿ ೧೮ ಬಿಜೆಪಿ, ೪ ಎಸ್.ಡಿ.ಪಿ. ಐ ಮತ್ತು ಒಂದು ಕಾಂಗ್ರೆಸ್ ಸ್ಥಾನಗಳನ್ನು ಹೊಂದಿದೆ. ೧೮ ಸ್ಥಾನಗಳನ್ನು ಪಡೆದುಕೊಂಡ ಬಿಜೆಪಿ ನಗರಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದಿದೆ. ವಿರೋಧ ಪಕ್ಷವಾಗಿ ಎಸ್.ಡಿ.ಪಿ.ಐ ಜವಾಬ್ದಾರಿಯನ್ನು ಹೊಂದಿದೆ.

ಇದುವರೆಗೆ ೧೮ನೇ ವಾರ್ಡ್ನ ಗೌಳಿಬೀದಿ ಸದಸ್ಯ ಉಮೇಶ್ ಸುಬ್ರಮಣ್ಯ ಅವರು ೧೨.೪.೨೦೨೨ ರಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರ ಅಧ್ಯಕ್ಷ ಸ್ಥಾನದ ಅವಧಿ ಮುಗಿದಿದೆ. ಈ ಸ್ಥಾನಕ್ಕೆ ಈಗಾಗಲೇ ಸದಸ್ಯರುಗಳಾದ ಕೆ.ಎಸ್. ರಮೇಶ್, ಮಹೇಶ್ ಜೈನಿ, ಎಸ್.ಸಿ. ಸತೀಶ್, ಕಾಳಚಂಡ ಎಂ. ಅಪ್ಪಣ್ಣ ಹಾಗೂ ವೈ.ಡಿ. ಶ್ವೇತ ಸೇರಿದಂತೆ ಇತರರು ತೀವ್ರ ಪೈಪೋಟಿ ನಡೆಸಿದ್ದಾರೆ.

ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಏಕೈಕ ಸದಸ್ಯ ರಾಜೇಶ್ ಯಲ್ಲಪ್ಪ ಅವರಿಗೆ ಈ ಸ್ಥಾನದ ಬಗ್ಗೆ ಆಸಕ್ತಿಯಿಲ್ಲ ಹಾಗೂ ಆಕಾಂಕ್ಷಿಯೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಅಧ್ಯಕ್ಷ ಸ್ಥಾನ ಬಿಜೆಪಿ ಪಕ್ಷದ ಸದಸ್ಯರುಗಳಾದ ಕೆ.ಎಸ್. ರಮೇಶ್, ಮಹೇಶ್ ಜೈನಿ, ಎಸ್.ಸಿ. ಸತೀಶ್, ಕಾಳಚಂಡ ಎಂ. ಅಪ್ಪಣ್ಣ ಹಾಗೂ ವೈ.ಡಿ. ಶ್ವೇತ ಇವರುಗಳ ಪೈಕಿ ಯಾರಿಗಾದರೂ ಒಬ್ಬರಿಗೆ ಸಿಗುವುದು ಖಚಿತವಾದರೂ ೧೮ ಸದಸ್ಯ ಸಂಖ್ಯಾ ಬಲವನ್ನು ಹೊಂದಿರುವ ಬಿಜೆಪಿ ಸದಸ್ಯರುಗಳೊಳಗೆ ಒಮ್ಮತದ ತೀರ್ಮಾನ ತೆಗೆದುಕೊಂಡು ಸರ್ವಾನುಮತದಿಂದ ಆಯ್ಕೆ ನಡೆಯುವ ಬಗ್ಗೆ ಗೊಂದಲಗಳಿವೆ.

-ಶ್ರೀವತ್ಸ