ಮಡಿಕೇರಿ, ಜೂ. ೧೭: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ನಗರದ ಚೆಸ್ಕಾಂ ಉಪ ವಿಭಾಗದಲ್ಲಿ ಇಂದು ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಗೆ ಜನರಿಂದ ಸೂಕ್ತ ಸ್ಪಂದನ ಕಂಡು ಬರಲಿಲ್ಲ. ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏಕಾಏಕಿ ಹೆಚ್ಚಳ ಮಾಡಿದೆ; ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶಭರಿತ ಮಾತುಗಳನ್ನಾಡುವ ಯಾರೊಬ್ಬರೂ ಕೂಡ ಸಭೆಯಲ್ಲಿ ಕಂಡು ಬರಲಿಲ್ಲ. ಬೆಳಿಗ್ಗೆ ೧೧ ಗಂಟೆಗೆ ನಿಗದಿಯಾಗಿದ್ದ ಸಭೆಗೆ ೧೨ ಗಂಟೆಯಾದರೂ ಸಾರ್ವಜನಿಕರು ಆಗಮಿಸಲಿಲ್ಲ. ಸೆಸ್ಕ್ನ ಕೆಲ ಅಧಿಕಾರಿಗಳು, ಕೆಲ ಗುತ್ತಿಗೆದಾರರು ಮಾತ್ರ ಸಭಾಂಗಣದಲ್ಲಿ ಕಂಡು ಬಂದರು. ವಿದ್ಯುತ್ ದರ ಏರಿಕೆಯಿಂದ ಆಕ್ರೋಶ ಗೊಂಡಿರುವ ಜನತೆ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಪತ್ರಿಕಾ ಹೇಳಿಕೆಗಳ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯುತ್ ದರ ಏರಿಕೆ ವಿರುದ್ಧ ಟೀಕೆ ಮಾಡುತ್ತಾ ರೌದ್ರಾವತಾರ ತೋರುವ ಸಂಘ ಸಂಸ್ಥೆಗಳ ಯಾವ ಪ್ರಮುಖರೂ ಕೂಡ ಸಭೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ‘ಉತ್ತರನ ಪೌರುಷ ಒಲೆಯ ಮುಂದೆ’ ಎಂಬ ಗಾದೆ ಮಾತಿನಂತೆ ವಿದ್ಯುತ್ ದರ ಏರಿಕೆ ವಿರುದ್ಧ ಪತ್ರಿಕೆ, ಮಾಧ್ಯಮಗಳೆದುರು, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಹರಿಹಾಯ್ದ ಮಂದಿ ವಿದ್ಯುತ್ ಜನಸಂರ್ಪಕ ಸಭೆಯಲ್ಲಿ ಪಾಲ್ಗೊಂಡು ಸಂಬAಧಿಸಿದ ಅಧಿಕಾರಿಗಳ ಎದುರು
ತಮ್ಮ ಅಹವಾಲನ್ನು ಮುಂದಿಡದಿರುವುದು ದುರಂತವೇ ಸರಿ!
- ಉಜ್ವಲ್ ರಂಜಿತ್