ಕುಶಾಲನಗರ, ಜೂ. ೧೭: ಕಾಡಾನೆಗಳ ಕಾರ್ಯಾಚರಣೆ ಸಂದರ್ಭ ಒಂಟಿ ಸಲಗ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ್ದು, ಕೂದಳೆಯ ಅಂತರದಲ್ಲಿ ಪಾರಾದ ಘಟನೆ ಕುಶಾಲನಗರ ವಲಯ ಅರಣ್ಯದ ವ್ಯಾಪ್ತಿಯಲ್ಲಿ ನಡೆದಿದೆ.

ಕುಶಾಲನಗರ ವಲಯ ಅರಣ್ಯದ ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ಗದ್ದೆಹಳ್ಳ - ಚೆಟ್ಟಳ್ಳಿ ಬಳಿ ಗೇರುಬಾಣೆ ಎಸ್ಟೇಟ್‌ನಲ್ಲಿ ಈ ಘಟನೆ ಶುಕ್ರವಾರ ಸಂಜೆ ವೇಳೆ ನಡೆದಿದ್ದು ಅರಣ್ಯ ಇಲಾಖೆಯ ಆರ್‌ಆರ್‌ಟಿ ತಂಡದ ಯೋಗೀಶ್ ಕಾಡಾನೆಯಿಂದ ಪಾರಾದ ಯುವಕ.

ಎಂದಿನAತೆ ಅರಣ್ಯ ಇಲಾಖೆಯ ಆನೆಕಾಡು ಅರಣ್ಯದ ಉಪ ಅರಣ್ಯ ವಲಯ ಅಧಿಕಾರಿ ದೇವಯ್ಯ ಅವರ ನೇತೃತ್ವದಲ್ಲಿ ಆರ್‌ಆರ್‌ಟಿ ಮತ್ತು ಎಲಿಫೆಂಟ್ ಟಾಸ್ಕ್ ಫೋರ್ಸ್ನ ಸುಮಾರು ೨೦ ಕ್ಕೂ ಅಧಿಕ ಸದಸ್ಯರು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾ ಚರಣೆಯಲ್ಲಿ ತೊಡಗಿದ್ದರು. ಎರಡು ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಗೇರುಬಾಣೆ ಎಸ್ಟೇಟ್‌ನಿಂದ ಏಕಾಏಕಿ ಹೊರಬಂದ ಒಂಟಿ ಸಲಗ ಎದುರುಗಡೆ ಕಂಡು ಬಂದ ಯೋಗೀಶ್‌ನನ್ನು ಅಟ್ಟಿಸಿಕೊಂಡು ಹೋಗಿದೆ.

ಈ ಸಂದರ್ಭ ಜೊತೆಗಿದ್ದ ಕಾರ್ಯಾಚರಣೆ ತಂಡದ ಸದಸ್ಯರು ಬೊಬ್ಬೆ ಹಾಕುವ ಮೂಲಕ ಆನೆಯನ್ನು ಎಸ್ಟೇಟ್ ಒಳಗೆ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಸಂದರ್ಭ ದಾಳಿಯಿಂದ ತಪ್ಪಿಸಿಕೊಂಡ ಯೋಗೇಶ್ ಸೇರಿದಂತೆ ಕೆಲವು ಸಿಬ್ಬಂದಿಗಳು ಎದೆಗುಂದದೆ ಆನೆಯ ದಾಳಿಯ ಕ್ಷಣಗಳನ್ನು ಚಿತ್ರೀಕರಿಸಿ ಕೊಂಡಿದ್ದಾರೆ.

ಒಂಟಿ ಸಲಗದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಯೋಗೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಕಾರ್ಯಾಚರಣೆ ತಂಡದಲ್ಲಿದ್ದ ಅಧಿಕಾರಿ ಸಿಬ್ಬಂದಿಗಳು ರೋಷಗೊಂಡಿದ್ದ ಒಂಟಿ ಸಲಗದಿಂದ ತಪ್ಪಿಸಿಕೊಂಡು ಸುರಕ್ಷಿತ ಪ್ರದೇಶಕ್ಕೆ ತೆರಳುವಲ್ಲಿ ಸಫಲರಾಗಿದ್ದಾರೆ.

ಮಾಹಿತಿ ತಿಳಿದ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ಮತ್ತು ಹೆಚ್ಚುವರಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಸಿಬ್ಬಂದಿಗಳ ಕ್ಷೇಮ ವಿಚಾರಿಸಿದ್ದಾರೆ.

-ವರದಿ : ಚಂದ್ರಮೋಹನ್