(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜೂ. ೧೬: ಕೊಡಗಿನ ಹಲವಾರು ಕಾಫಿ ತೋಟಗಳನ್ನು ಕಾಡಾನೆಗಳು ತಮ್ಮ ವಾಸಸ್ಥಳವಾಗಿ ಮಾಡಿಕೊಂಡಿವೆ. ಹೆಣ್ಣಾನೆಗಳು ಮರಿಯಾನೆಗಳಿಗೆ ಜನ್ಮ ನೀಡುತ್ತಾ ತನ್ನ ಸಂತಾನವನ್ನು ವೃದ್ಧಿ ಮಾಡಿಕೊಳ್ಳುತ್ತಲೇ ಕಾಫಿ ತೋಟವನ್ನು ಅರಣ್ಯ ಪ್ರದೇಶವನ್ನಾಗಿ ರೂಪುಗೊಳಿಸಿದೆ. ಇವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹಲವಾರು ರೀತಿಯ ಕ್ರಮಗಳನ್ನು ಕೈಗೊಂಡಿದೆ ಆದರೂ ಸಂಪೂರ್ಣವಾಗಿ ಕಾಡಾನೆಗಳನ್ನು ನಿಯಂತ್ರಿಸಲು ಸದ್ಯದ ಮಟ್ಟಿಗೆ ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ.

ವಿಶೇಷವಾಗಿ ದಕ್ಷಿಣ ಕೊಡಗಿನಲ್ಲಿ ಕಾಡಾನೆಯ ಉಪಟಳ ನಿರಂತರವಾಗಿ ರೈತರನ್ನು, ಕಾರ್ಮಿಕರನ್ನು, ದಿನನಿತ್ಯ ಕಾಡುತ್ತಿದೆ. ಕಾರ್ಮಿಕರು ತೋಟದ ಕೆಲಸಕ್ಕೆ ಮುಂದಾಗಲು ಸಾಧ್ಯವಾಗುತ್ತಿಲ್ಲ. ಕಾಫಿ ತೋಟದಲ್ಲಿ ನೆಲೆ ನಿಂತಿರುವ ಕಾಡಾನೆಯ ಹಿಂಡು ಯಾವುದೇ ಸಂದರ್ಭದಲ್ಲಿ ಕಾರ್ಮಿಕರ ಮೇಲೆ ದಾಳಿ ನಡೆಸಬಹುದೆಂಬ ಭಯದಿಂದ ಕಾಫಿ ತೋಟದ ದೈನಂದಿನ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ತೋಟದ ಮಾಲೀಕರಿಗೆ ಹಾಗೂ ರೈತರಿಗೆ ವೇತನ ನೀಡುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಕಾರ್ಮಿಕರ ನೇಮಕ

ಹಲವು ಕಾಫಿ ತೋಟಗಳಲ್ಲಿ ಕಾಡಾನೆಗಳು ವಾಸಿಸುತ್ತಿರುವುದರಿಂದ ತೋಟದ ಕೆಲಸಕ್ಕೆ ಅಡಚಣೆಯಾಗುತ್ತಿದೆ. ಆದರೂ ತೋಟದ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಲೇಬೇಕಾದ ಅನಿವಾರ್ಯತೆ ಇರುವುದರಿಂದ ಹಲವು ಕಾಫಿ ತೋಟಗಳಲ್ಲಿ ಕಾಡಾನೆಗಳ ಬಗ್ಗೆ ಮಾಹಿತಿ ಪಡೆಯಲು ಕಾರ್ಮಿಕರನ್ನು ಉತ್ತಮ ವೇತನ ನೀಡಿ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದಾರೆ. ಇಂತಹ ಕಾರ್ಮಿಕರು ಮುಂಜಾನೆ ತೋಟಕ್ಕೆ ತೆರಳಿ ಕಾಡಾನೆಗಳ ಇರುವಿಕೆಯ ನಿಖರತೆಯನ್ನು ತಿಳಿಸಿದ ನಂತರವೇ ಕಾರ್ಮಿಕರು ತೋಟದ ದೈನಂದಿನ ಕೆಲಸ ಕಾರ್ಯಗಳಿಗೆ ಮುಂದಾಗುತ್ತಾರೆ.

ಕಾಫಿ ತೋಟದಲ್ಲಿ ನೆಲೆ ನಿಂತ ಕಾಡಾನೆಗಳ ಸಂಚಾರದ ಮಾಹಿತಿಯನ್ನು ಪಡೆಯಲು ನೇಮಕಗೊಳಿಸಿದ ಕಾರ್ಮಿಕರು ಇವುಗಳ ಸಂಚಾರದ ಮಾಹಿತಿಯನ್ನು ತೋಟದ ಮಾಲೀಕರಿಗೆ ಸಮಯಕ್ಕೆ ಸರಿಯಾಗಿ ತಿಳಿಸಬೇಕಾಗಿದೆ. ಕಾಡಾನೆಗಳ ಸಂಚಾರ ಬದಲಾಗುತ್ತಿದ್ದಂತೆಯೇ ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳವನ್ನು ಬದಲಾಯಿಸುತ್ತಾರೆ.

(ಮೊದಲ ಪುಟದಿಂದ) ಇದರಿಂದ ತೋಟದ ಕೆಲಸ ಅಷ್ಟಾಗಿ ಸಾಗುತ್ತಿಲ್ಲ ತೋಟದ ಕಾರ್ಮಿಕ ರೊಂದಿಗೆ ಹೆಚ್ಚುವರಿಯಾಗಿ ಕಾಡಾನೆಗಳ ಪಹರೆ ನಡೆಸುವ ಕಾರ್ಮಿಕರಿಗೂ ಮಾಲೀಕರು ವೇತನ ನೀಡುವ ಅನಿವಾರ್ಯತೆ ಎದುರಾಗಿದೆ.

ಇನ್ನಷ್ಟು ಹೊರೆ

ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳದಿಂದ ಕಾಫಿ ತೋಟದಿಂದ ಹೆಚ್ಚಿನ ಆದಾಯ ನಿರೀಕ್ಷಿಸಲು ತೋಟ ಮಾಲೀಕರಿಗೆ ಹಾಗೂ ರೈತರಿಗೆ ಸಾಧ್ಯವಾಗುತ್ತಿಲ್ಲ. ಇರುವ ತೋಟವನ್ನು ಉಳಿಸಿ ಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ತೋಟ ಮಾಲೀಕರು ಸಿಲುಕಿದ್ದಾರೆ. ಇದರ ಮಧ್ಯೆ ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಡಾನೆಗಳ ಉಪಟಳ ನಿರಂತರವಾಗಿ ರೈತರನ್ನು ಕಾಡುತ್ತಿದೆ. ತೋಟದಲ್ಲಿ ಕಾರ್ಮಿಕರೊಂದಿಗೆ ಹೆಚ್ಚುವರಿಯಾಗಿ ಆನೆ ವೀಕ್ಷಣೆಗೆ ಕಾರ್ಮಿಕರನ್ನು ಹೆಚ್ಚುವರಿ ಹೊರೆ

ತೋಟದಲ್ಲಿ ಕಾಡಾನೆಗಳ ಹಿಂಡು ಯಾವುದೇ ಸಂದರ್ಭದಲ್ಲಿ ಕಾರ್ಮಿಕರ ಮೇಲೆ ದಾಳಿ ನಡೆಸಬಹುದು; ಹೀಗಾಗಿ ಕಾರ್ಮಿಕರು ಭಯದ ವಾತಾವರಣದಲ್ಲಿಯೇ ಕೆಲಸ ನಿರ್ವಹಿಸಬೇಕಾಗಿದೆ. ಭಯ ಕಾಡುತ್ತಿರುವು ದರಿಂದ ಕೆಲಸ ಸಲೀಸಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ವಿಸ್ತಾರವಾದ ತೋಟದಲ್ಲಿ ಆನೆ ಇರುವ ಜಾಗವನ್ನು ಹೊರತು ಪಡಿಸಿ ಇತರ ಭಾಗದಲ್ಲಿ ಕೆಲಸ ನಿರ್ವಹಿಸುತ್ತೇವೆ. ಆನೆ ಸಂಚಾರದ ಬಗ್ಗೆ ಇದಕ್ಕಾಗಿಯೇ ವಿಶೇಷವಾಗಿಯೇ ಕಾರ್ಮಿಕರನ್ನು ನೇಮಿಸಿದ್ದೇವೆ. ಇವರು ಆನೆಗಳ ಸಂಚಾರದ ಮಾಹಿತಿಯನ್ನು ತಿಳಿಸುತ್ತಾರೆ. ಹೀಗಾಗಿ ತೋಟದ ಕೆಲಸ ವಿಳಂಬವಾಗುತ್ತಿದೆ. ತೋಟದ ಕಾರ್ಮಿಕರಲ್ಲದೆ ಕಾಡಾನೆಗಳ ಇರುವಿಕೆಯನ್ನು ಪತ್ತೆ ಹಚ್ಚಲು ಹೆಚ್ಚುವರಿ ಕಾರ್ಮಿಕರನ್ನು ನೇಮಕ ಮಾಡಿಕೊಂಡಿರುವುದರಿAದ ಇವರಿಗೂ ಹೆಚ್ಚುವರಿ ವೇತನ ನೀಡಬೇಕಾಗಿದೆ.

-ರಾಜ, ಕಾಫಿ ತೋಟ ರೈಟರ್, ಬೆಮ್ಮತ್ತಿ