ವೀರಾಜಪೇಟೆ, ಜೂ. ೧೬: ಸರಕಾರದಿಂದ ಬರುವ ಅನುದಾನದಲ್ಲಿ ಪುರಸಭೆಯ ಎಲ್ಲಾ ವಾರ್ಡ್ಗಳ ಸದಸ್ಯರು ಒಗ್ಗಟ್ಟಿನಿಂದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಮುಂದಾಗಬೇಕು ಎಂದು ರಾಜ್ಯ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ವೀರಾಜಪೇಟೆ ಪಟ್ಟಣದ ವಿದ್ಯಾನಗರ, ಸುಭಾಷ್ ನಗರ ಮತ್ತು ಸಿಲ್ವನಗರದಲ್ಲಿ ನೂತನ ಕಾಂಕ್ರೀಟ್ ರಸ್ತೆ ಸೇರಿದಂತೆ ಒಟ್ಟು ರೂ. ೨೩.೭೫ ಲಕ್ಷ ನಗರೋತ್ಥಾನ ಹಂತದ ಅನುದಾನದಲ್ಲಿ ಮೂರು ಕಡೆ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಪೊನ್ನಣ್ಣ ಅವರು ಮಾತನಾಡಿ, ಜನಪ್ರತಿನಿಧಿಗಳಾದವರು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಸ್ಥಳೀಯರು ಕೂಡ ಅಭಿವೃದ್ಧಿ ಕಾಮಗಾರಿ ನಡೆಸುವ ಸಂದರ್ಭ ಸಹಕಾರ ನೀಡುವಂತಾಗಬೇಕು, ಸದಸ್ಯರು ರಾಜಕೀಯವನ್ನು ದೂರವಿಟ್ಟು ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ನಗರದ ಈ ಭಾಗದಲ್ಲಿ ಇತ್ತೀಚೆಗೆ ಸಾಕಷ್ಟು ಮನೆಗಳು ನಿರ್ಮಾಣಗೊಂಡಿದ್ದು, ಇಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯಬೇಕಾಗಿದೆ. ಮುಂದಿನ ದಿನದಲ್ಲಿ ಈ ಕ್ಷೇತ್ರದ ಶಾಸಕರೊಂದಿಗೆ ನಾವೆಲ್ಲರೂ ಕೈ ಜೋಡಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸುವುದಾಗಿ ಹೇಳಿದರು.

ಪುರಸಭೆ ಅಭಿಯಂತರ ಹೇಮ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನ ಇತರ ಪಟ್ಟಣಗಳಿಗಿಂತ ವೀರಾಜಪೇಟೆ ಪುರಸಭೆ ೧೮ ವಾರ್ಡ್ಗಳ ವ್ಯಾಪ್ತಿ ಬಹಳ ದೊಡ್ಡದಾಗಿದ್ದು, ಅದನ್ನು ಪರಿಗಣನೆಗೆ ತೆಗೆದುಕೊಂಡು ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಅಧ್ಯಕ್ಷೆ ಸುಸ್ಮಿತಾ, ಸ್ಥಳೀಯ ವಾರ್ಡ್ ಸದಸ್ಯರಾದ ಮಹ್ಮದ್ ರಾಫಿ, ಎಸ್.ಹೆಚ್. ಮತೀನ್, ಕಾಂಗ್ರೆಸ್ ಮುಖಂಡರಾದ ರಂಜಿ ಪೂಣಚ್ಚ, ಮಾದಂಡ ತಿಮ್ಮಯ್ಯ, ಸಿ.ಎ. ನಾಸೀರ್, ಸಂಕೇತ್ ಪೂವಯ್ಯ, ವಿ.ಕೆ. ಸತೀಶ್, ಡಿ.ಪಿ. ರಾಜೇಶ್, ನರೇಂದ್ರ ಕಾಮತ್, ಜಿ.ಜಿ. ಮೋಹನ್, ಜೋಕಿಂ ರಾಡ್ರಿಗಾಸ್ ಹಾಗೂ ಪುರಸಭೆ ಸದಸ್ಯರುಗಳು ಹಾಗೂ ಗುತ್ತಿಗೆದಾರ ನಾಮೇರ ಬಿ. ನವೀನ್ ಭಾಗವಹಿಸಿದ್ದರು.