ಮಡಿಕೇರಿ, ಜೂ. ೧೫: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಿರಿಯ ರಾಜಕಾರಣಿ ಎನ್.ಎಸ್. ಭೋಸರಾಜು ಅವರಿಗೆ ಕೊಡಗು ಜಿಲ್ಲೆಯಲ್ಲಿ ಬೆಟ್ಟದಷ್ಟು ಸಾಲು ಸಾಲು ಸವಾಲಿನ ಮಧ್ಯೆ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ.

ವಿಶೇಷ ಸಂಸ್ಕೃತಿ, ಆಚಾರ, ವಿಚಾರಗಳನ್ನು ಹೊಂದಿರುವ ರಾಜ್ಯದ ವಿಶಿಷ್ಟ ಜಿಲ್ಲೆ ಕೊಡಗು. ಕೊಡಗು ಗುಡ್ಡಗಾಡು ಪ್ರದೇಶ. ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬಗೆಹರಿಯದ ಹಲವು ಜ್ವಲಂತ ಸಮಸ್ಯೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲು ಬಹುತೇಕರು ಹಿಂದೇಟು ಹಾಕಿದರು. ಅಂತಿಮವಾಗಿ ಎನ್.ಎಸ್. ಭೋಸರಾಜು ಅವರಿಗೆ ಕೊಡಗು ಉಸ್ತುವಾರಿ ನೀಡಲಾಗಿದೆ.

ಆದರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳು, ಹಾಗೂ ವಿಶೇಷ ಯೋಜನೆಗಳನ್ನು ಕಾಣದೆ ಕೊಡಗು ನಿರ್ಲಕ್ಷö್ಯಕ್ಕೊಳಗಾಗಿದೆ. ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಅವರು ಜಿಲ್ಲೆಯಲ್ಲಿ ಬೆಟ್ಟದಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ.

ಮಳೆಗಾಲ ಹಾನಿಯ ಸವಾಲು!

ಕೊಡಗು ಜಿಲ್ಲೆಯಲ್ಲಿ ೨೦೧೮ ರಿಂದ ನಿರಂತರವಾಗಿ ಮಳೆಗಾಲದಲ್ಲಿ ಸಾವುನೋವುಗಳು ಸಂಭವಿಸುತ್ತಿದೆ. ಮಳೆಗಾಲದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಾಕಷ್ಟು ಪ್ರಮಾಣದಲ್ಲಿ ಜಿಲ್ಲೆಯಲ್ಲಿ ನಷ್ಟವುಂಟಾಗಿದೆ. ಕಾವೇರಿ ನದಿ ಪ್ರವಾಹಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡು ಜನರು ಬೀದಿಪಾಲಾಗಿದ್ದಾರೆ. ಇದೀಗ ಮಳೆಗಾಲ ಜಿಲ್ಲೆಗೆ ಕಾಲಿಡುತ್ತಿದೆ.

ದೂರದ ರಾಯಚೂರು ಜಿಲ್ಲೆಯ ಹಿರಿಯ ರಾಜಕಾರಣಿ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಅವರಿಗೆ ಕೊಡಗು ಜಿಲ್ಲೆಯ ಮಳೆಗಾಲವನ್ನು ಸಮರ್ಪಕವಾಗಿ ಎದುರಿಸಿ, ಮಳೆಗಾಲದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವುದು ಮುಂದಿರುವ ಮೊದಲ ಸವಾಲು.

ಕೊಡಗು ಜಿಲ್ಲೆಯಿಂದ ೪೦೦ಕ್ಕೂ ಹೆಚ್ಚು ಕಿಲೋಮಿಟರ್ ದೂರವಿರುವ ರಾಯಚೂರು ಜಿಲ್ಲೆಯವರಾದ ಎನ್.ಎಸ್. ಭೋಸರಾಜು ಅವರು, ಮಳೆಗಾಲ ಸಂದರ್ಭದಲ್ಲಿ ಜನರ ಸ್ಪಂದನೆಗೆ ಲಭ್ಯವಿರುತ್ತಾರಾ? ಎಂಬುದೇ ದೊಡ್ಡ ಅನುಮಾನವಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರೇ ಗೆಲುವು ಸಾಧಿಸಿರುವುದರಿಂದ ಉಸ್ತುವಾರಿ ಸಚಿವರಿಗೆ ಕೆಲಸ ನಿರ್ವಹಿಸಲು ಸುಲಭವಾಗಬಹುದು. ಮಳೆಗಾಲವನ್ನು ಸಮರ್ಪಕವಾಗಿ ಎದುರಿಸಲು ಜಿಲ್ಲೆಯ ಶಾಸಕರ ಮಾಹಿತಿ ಪಡೆದು, ಮಳೆಗಾಲದಲ್ಲಿ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಕಾರ್ಯೋನ್ಮುಖರಾಗಬೇಕಾಗಿದೆ.

ನದಿದಡದಲ್ಲಿರುವ ನಿವಾಸಿಗಳು ಮಳೆಗಾಲದಲ್ಲಿ ಪ್ರಾಣವನ್ನು ಕೈ ಹಿಡಿದು ಜೀವನ ನಡೆಸುವಂತಹ ಪರಿಸ್ಥಿತಿ. ೨೦೧೯ ರಲ್ಲಿ ಕಾವೇರಿ ನದಿ ಪ್ರವಾಹದಿಂದ ಉಂಟಾದ ನೆಲ್ಲಿಹುದಿಕೇರಿ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೩೫೦ ಕ್ಕೂ ಹೆಚ್ಚು ಮನೆಗಳು ನೆಲಸಮಗೊಂಡಿತ್ತು.

ನಾಲ್ಕು ವರ್ಷಗಳು ಕಳೆದರು ಸಹಾ ಇಂದಿಗೂ ಕೂಡ ನಿರಾಶ್ರಿತರು ಬಾಡಿಗೆ ಮನೆ ಹಾಗೂ ಗುಡಿಸಲು ಕಟ್ಟಿ ಜೀವನ ನಡೆಸುತ್ತಿದ್ದಾರೆ. ಕಾವೇರಿ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸೂರು ಕಳೆದುಕೊಂಡವರಿಗೆ ಸೂರು ಒದಗಿಸುವುದು ಕೂಡ ಉಸ್ತುವಾರಿ ಮೊದಲ ಆದ್ಯತೆ ಆಗಬೇಕಾಗಿದೆ.

ಸಮಸ್ಯೆಗಳಿಗೆ ಸಿಗುವುದೇ ಪರಿಹಾರ...!

ಕೊಡಗು ಜಿಲ್ಲೆ ರಾಜ್ಯ ಪುಟ್ಟ ಜಿಲ್ಲೆಯಾಗಿದ್ದರು ಸಹಾ ಅಭಿವೃದ್ಧಿ ವಿಷಯದಲ್ಲಿ ರಾಜ್ಯದಲ್ಲಿ ಕಡೆ ಗಣನೆಗೆ ಒಳಗಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಶಾಸಕರಿಬ್ಬರು ಗೆಲುವು ಸಾಧಿಸಿದ್ದಾರೆ. ಶಾಸಕದ್ವಯರ ಮೇಲೆ ಜಿಲ್ಲೆಯ ಜನತೆ ಹಲವಾರು ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಇದೀಗ ಉಸ್ತುವಾರಿ ಸಚಿವರು ಮೇಲೆ ಕೂಡ ನೀರಿಕ್ಷೆ ಇಟ್ಟುಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಾಡುಪ್ರಾಣಿ ಹಾಗೂ ಮಾನವ ಸಂಘರ್ಷದಿAದ ಪ್ರತೀ ವರ್ಷ ಸಾವು ನೋವು ಸಂಭವಿಸುತ್ತಲೇ ಇದೆ. ಇದುವರೆಗೆ ಆನೆ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅದೇ ರೀತಿಯಲ್ಲಿ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಕಲ್ಲುಗಳಿಂದ ತುಂಬಿಕೊAಡಿರುವ ರಸ್ತೆಯಲ್ಲೇ ಜನರು ಸಂಚರಿಸುವ ಪರಿಸ್ಥಿತಿ ಇದೆ.

ಕೆಲವೊಂದು ಗ್ರಾಮಗಳಲ್ಲಿನ ರಸ್ತೆಗಳು ಡಾಂಬರು ಕಾಣದೇ ದಶಕಗಳು ಕಳೆದಿದೆ. ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಕಾಫಿ ಬೆಳೆಗಾರರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಕಳೆದ ಹಲವು ವರ್ಷಗಳ ಬೇಡಿಕೆಯಾದ ಕಾಫಿ ಬೆಳೆಗಾರರ ಕಾಫಿ ತೋಟಕ್ಕೆ ಹತ್ತು ಹೆಚ್.ಪಿ. ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಬೇಡಿಕೆ ಇದುವರೆಗೆ ಈಡೇರಲಿಲ್ಲ. ಕಾಫಿ ಬೆಳೆಗಾರರ ಸಾಲಮನ್ನಾ ಮಾಡಬೇಕೆಂಬ ಬೇಡಿಕೆ ಕೂಡ ಇದೆ. ಈ ಎಲ್ಲಾ ಬೇಡಿಕೆಗಳನ್ನು ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಸ್ಪಂದಿಸುತ್ತಾರಾ? ಎಂದು ಕಾದುನೋಡಬೇಕಾಗಿದೆ.

ಮಡಿಕೇರಿ ತಾಲೂಕು ಭಾಗಮಂಡಲದಲ್ಲಿ ಪೂರ್ಣಗೊಳ್ಳದ ಸೇತುವೆ ಕಾಮಗಾರಿ, ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ತಾಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ, ಕ್ರೀಡಾ ವಿಶ್ವವಿದ್ಯಾಲಯ, ರಸ್ತೆಗಳ ಅಭಿವೃದ್ಧಿ, ಕೊಡಗು ಜಿಲ್ಲೆಗೆ ವಿಶೇಷ ಯೋಜನೆಗಳು, ಪ್ರವಾಸೋದ್ಯಮ ಅಭಿವೃದ್ಧಿ, ತಾಲೂಕು ಕೇಂದ್ರಗಳಲ್ಲಿ ಪ್ರತ್ಯೇಕ ಕ್ರೀಡಾಂಗಣಗಳು, ಈ ಹಿಂದಿನ ಸರ್ಕಾರದಲ್ಲಿ ಘೋಷಣೆಯಾದ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಆಸಕ್ತಿ ವಹಿಸುವುದು, ಹೀಗೆ ಹತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದ ಸವಾಲು ಕೊಡಗು ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರ ಮೇಲಿದೆ. - ಕೆ.ಎಂ ಇಸ್ಮಾಯಿಲ್ ಕಂಡಕರೆ