ಶನಿವಾರಸಂತೆ, ಜೂ. ೧೬: ಇತ್ತ ವಾಡಿಕೆಯ ಮುಂಗಾರು ಮಳೆಯೂ ಸುರಿಯಲಿಲ್ಲ. ಅತ್ತ ಚಂಡಮಾರುತದ ಮಳೆಯೂ ಕೈಕೊಟ್ಟು ದಿಕ್ಕು ಬದಲಾಯಿಸಿದ್ದು ಭತ್ತದ ವ್ಯವಸಾಯಕ್ಕೆ ಸಿದ್ಧತೆ ಮಾಡಿಕೊಂಡಿದ್ದ ರೈತರು ಕಂಗಾಲಾಗಿದ್ದಾರೆ. ಮಳೆಯ ಕಣ್ಣಾಮುಚ್ಚಾಲೆಯಾಟದಿಂದ ಆಗಸದತ್ತ ಮೊಗ ಮಾಡಿ ತಲೆ ಮೇಲೆ ಕೈಹೊತ್ತು ರೈತರು ಕುಳಿತ್ತಿದ್ದಾರೆ. ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.

ಶನಿವಾರಸAತೆ-ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮಳೆ ವಿಳಂಬವಾಗಿದ್ದು ಬಹುತೇಕ ರೈತರು ಗದ್ದೆಗಳನ್ನು ಉಳುಮೆ ಮಾಡಿ ಹದಗೊಳಿಸಿದ್ದು ತುಂಗ ಹಾಗೂ ಇಂಟಾನ್ ತಳಿಯ ಬೀಜದ ಭತ್ತ ಖರೀದಿಸಿ ಅಗೆ ಹಾಕಲು ಸಿದ್ಧರಾಗಿ ಮಳೆಯ ನಿರೀಕ್ಷೆಯಲ್ಲಿದ್ದರು. ಮುಂಗಾರು ಮುನಿಸಿಕೊಂಡರೂ ಚಂಡಮಾರುತವಾದರೂ ಮಳೆ ಸುರಿಸಿ ಗದ್ದೆಯನ್ನು ಹದಗೊಳಿಸುವುದೆಂಬ ನಿರೀಕ್ಷೆಯೂ ಹುಸಿಯಾಯಿತು.

ಕಳೆದ ೩ ವಾರಗಳಿಂದ ಮಳೆಯಾಗಲಿಲ್ಲ. ಒಂದು ವಾರದಿಂದ ಹವಾಮಾನ ವೈಪರಿತ್ಯದಿಂದ ಕ್ಷಣ ಬಿಸಿಲು ಕ್ಷಣ ತುಂತುರು ಮಳೆಯಾಗುತ್ತಿತ್ತು.ಇದೀಗ ಬಿಸಿಲಿನ ವಾತಾವರಣ. ಜೂನ್ ೧೫ ರೊಳಗೆ ಭತ್ತದ ಬೀಜ ಬಿತ್ತನೆ ಕೆಲಸ ಮುಗಿಸಬೇಕು ಎಂದು ಅಪ್ಪಶೆಟ್ಟಳ್ಳಿ ಗ್ರಾಮದ ರಕ್ಷಿತ್ ಗೌಡ, ಕಾಜೂರು ಗ್ರಾಮದ ಚಂದ್ರಣ್ಣ ಹಾಗೂ ಇತರ ಕೆಲ ರೈತರು ತಮ್ಮ ಗದ್ದೆಗಳನ್ನು ಉತ್ತು, ಪಟ ಮಾಡಿ ಹದಗೊಳಿಸಿದ್ದರು. ಮುಂಗಾರು ವಿಳಂಬವಾದರೆ ಅಗೆ ಹಾಕಿ, ಸಸಿಮಡಿ ಬೆಳೆದು ನಾಟಿ ಕೆಲಸ ಮಾಡಲು ತಡವಾಗುತ್ತದೆ. ಕೊಯ್ಲು ವಿಳಂಬವಾಗಿ ಆ ಸಮಯದಲ್ಲೂ ಚಂಡಮಾರುತ ಮಳೆಯಾದರೆ ಭತ್ತದ ಬೆಳೆ ಹಾನಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೋಬಳಿ ವ್ಯಾಪ್ತಿಯಲ್ಲಿ ವರ್ಷಾರಂಭದಿAದ ಜೂ.೧೫ ರವರೆಗೆ ೧೫೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ೩೨೦.೨೫ ಮಿ.ಮೀ. ಮಳೆಯಾಗಿತ್ತು. ಮುಂಗಾರು ಮಳೆಯ ಕೊರತೆಯಿಂದ ರೈತರಿಗೆ ಭತ್ತದ ಬೀಜ ಬಿತ್ತನೆಗೆ ಅಡಚಣೆಯಾಗಿದೆ.

ಹಾಗೆಯೇ ಕಾಫಿ ತೋಟಗಳಲ್ಲಿಯೂ ಮಳೆಯ ಕೊರತೆಯಿಂದ ಬಿಸಿಲಿಗೆ ಕಾಫಿಯ ಎಳೆಕಾಯಿ ಕೆಂಪು ಬಣ್ಣಕ್ಕೆ ತಿರುಗುತ್ತಿದೆ. ಗೊಬ್ಬರ ಹಾಕಲು ಸಕಾಲವಾಗಿದೆ. ಮಳೆಯಾಗದೇ ಗೊಬ್ಬರ ಹಾಕುವಂತಿಲ್ಲ. ಗಿಡಗಳಲ್ಲಿ ಬೋರರ್ ಕಾಣಿಸಿಕೊಳ್ಳುತ್ತಿದ್ದು; ಬೆಳೆಗಾರರು ಚಿಂತೆಗೀಡಾಗಿದ್ದಾರೆ.

-ಶ.ಗ.ನಯನತಾರಾÉ