ಸೋಮವಾರಪೇಟೆ, ಜೂ. ೧೬: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಡಿಕೇರಿಯ ಪುರಾತತ್ವ ಸಂಗ್ರಹಾಲಯಗಳು, ಪರಂಪರಾ ಇಲಾಖೆ ಹಾಗೂ ಕಾಲೇಜಿನ ಸಹಯೋಗದೊಂದಿಗೆ ಪರಂಪರಾ ಕೂಟ ಉದ್ಘಾಟನೆ ಮತ್ತು ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಹುಣಸೂರು ಅಪೂರ್ವ ನಾಣ್ಯ ಮತ್ತು ನೋಟುಗಳ ಸಂಗ್ರಾಹಕ ಪಿ.ಕೆ. ಕೇಶವಮೂರ್ತಿ ಉದ್ಘಾಟಿಸಿದರು. ನಂತರ ಮಾತನಾಡಿ, ಕಳೆದ ೪೦ ವರ್ಷಗಳಿಂದ ಹಳೆಯ ನೋಟು ಮತ್ತು ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶನ ಕಾರ್ಯ ಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆ ಮೂಲಕ ಯುವ ಜನಾಂಗಕ್ಕೆ ಹಿಂದಿನ ಕಾಲದ ವ್ಯವಸ್ಥೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂಗ್ರಹದಲ್ಲಿ ಹಲವು ರಾಜವಂಶಗಳ, ವಿದೇಶದ ಬೆಲೆಬಾಳುವ ನಾಣ್ಯ ಮತ್ತು ನೋಟುಗಳ ಸಂಗ್ರಹಗಳಿವೆ. ಎಲ್ಲ ನಾಣ್ಯಗಳನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸಿದಲ್ಲಿ, ರಾಜ ಸಂಸ್ಥಾನಗಳ ನಾಣ್ಯ ಪದ್ಧತಿಯ ಬಗ್ಗೆ ತಿಳಿಯಲು ಸಾಧ್ಯ. ನಮ್ಮ ದೇಶದಲ್ಲಿ ಬಹಳಷ್ಟು ಸಾಮ್ರಾಜ್ಯಗಳು ಆಳ್ವಿಕೆ ನಡೆಸಿದ್ದು, ಅವರ ಕಾಲದ ಆಡಳಿತ, ಆರ್ಥಿಕ ವ್ಯವಸ್ಥೆಯ ನೆಲೆಗಟ್ಟಿನ ಮೇಲೆ ನಾಣ್ಯ ಪದ್ಧತಿ ಚಲಾವಣೆಯಲ್ಲಿತ್ತು. ಚಿನ್ನ, ಬೆಳ್ಳಿ, ತಾಮ್ರದಂತಹ ನಾಣ್ಯಗಳು ಚಲಾವಣೆಯಲ್ಲಿದ್ದವು ಎಂದರು.
ಮಡಿಕೇರಿ ಪುರಾತತ್ವ ಇಲಾಖೆಯ ಕ್ಯೂರೇಟರ್ ರೇಖಾ ಮಾತನಾಡಿ, ಇತಿಹಾಸದಲ್ಲಿ ನಡೆದಿರುವ ಎಲ್ಲ ಘಟನೆಗಳಿಗೆ ನೈಸರ್ಗಿಕ ಐತಿಹಾಸಿಕವಾದ ಆಧಾರಗಳಿವೆ. ಇಂದು ಅವುಗಳನ್ನು ರಕ್ಷಿಸಿ, ಪೋಷಿಸಿ, ಸಂರಕ್ಷಿಸುವುದು ಇಲಾಖೆಯ ಕರ್ತವ್ಯವಾಗಿದೆ. ಪುರಾತನ ಕಟ್ಟಡಗಳು ಮತ್ತು ಪ್ರಾಚ್ಯವಸ್ತುಗಳನ್ನು ನಾವು ಮತ್ತು ಯುವ ಜನಾಂಗ ಸಂರಕ್ಷಿಸುವ ಕೆಲಸ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಕೆ.ಹೆಚ್. ಧನಲಕ್ಷಿö್ಮ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಸುನಿಲ್ ಇದ್ದರು.