ಸಿದ್ದಾಪುರ, ಜೂ. ೧೫: ಅಮ್ಮತ್ತಿ ಸಮೀಪದ ಇಂಜಿಲ ಗೆರೆಯ ಪುಲಿಯೇರಿ ಗ್ರಾಮ ದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಡಾ ನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದೆ. ಅಲ್ಲದೇ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಮಿತಿ ಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಕಾರ್ಮಿ ಕರಿಗೆ ಕಾಫಿ ತೋಟದೊಳಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಪುಲಿಯೇರಿ ಗ್ರಾಮದಲ್ಲಿ ಕಾಫಿ ಬೆಳೆಗಾರರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿತ್ತು. ಇಂಜಿಲಗೆರೆ ಪುಲಿಯೇರಿ ಗ್ರಾಮದ ನಿವಾಸಿಯಾಗಿರುವ ಚೋವಂಡ ವಾಸು ಪೊನ್ನಪ್ಪ ಎಂಬವರ ಕಾಫಿ ತೋಟದೊಳಗೆ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸಿ ಕಾಫಿ ಗಿಡಗಳನ್ನು ಹಾಗೂ ತೆಂಗಿನ ಮರಗಳನ್ನು ಎಳೆದು ಹಾಕಿ ಧ್ವಂಸಗೊಳಿಸಿದೆ. ಈ ಬಗ್ಗೆ ತೋಟದ ಮಾಲೀಕರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಕಾಡಾನೆಗಳ ಹಾವಳಿಯಿಂದಾಗಿ ಕಾಫಿ ತೋಟಗಳ ಲೈನ್ ಮನೆಗಳಿಂದ ಹಾಗೂ ತೋಟದೊಳಗಿನ ರಸ್ತೆಗಳಿಂದ ಶಾಲಾ -ಕಾಲೇಜುಗಳಿಗೆ ತೆರಳುವ ಮಕ್ಕಳು ಭಯದಿಂದಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆಯಾಗಿದೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.