ಗೋಣಿಕೊಪ್ಪಲು, ಜೂ. ೧೫: ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳುವ ಮೂಲಕ ಅಧಿಕಾರಿಗಳಿಂದ ಹೆಚ್ಚಿನ ಕೆಲಸ ಮಾಡಿಸಬೇಕು. ಅನಾವಶ್ಯಕವಾಗಿ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆಗೊಳಿಸಿ ಎಂದು ನನಗೆ ಒತ್ತಡ ಹಾಗೂ ಶಿಫಾರಸುಗಳನ್ನು ಯಾರೂ ಕೂಡ ಮಾಡದಿರಿ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಹುದಿಕೇರಿ ಕೊಡವ ಸಮಾಜದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಖಂಡರಿಗೆ ಹಮ್ಮಿಕೊಳ್ಳಲಾಗಿದ್ದ ಧನ್ಯವಾದ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು, ನಿಮ್ಮನ್ನು ಪ್ರತಿನಿಧಿಸಲು ನಾನೂ ವಿಧಾನಸಭೆಯ ಮೆಟ್ಟಿಲನ್ನು ಶಾಸಕನಾಗಿ ಹತ್ತಿರುವೆ. ನನ್ನೊಂದಿಗೆ ಮಾನಸಿಕವಾಗಿ ತಾವೆಲ್ಲರೂ ಇರಬೇಕು.
ಚುನಾವಣಾ ಸಂದರ್ಭದಲ್ಲಿ ವಿರೋಧ ಪಕ್ಷದಿಂದ ಆರೋಗ್ಯಕರವಾದ ಪ್ರಚಾರ ನಡೆಯಲಿಲ್ಲ. ಆದರೆ ನಾವುಗಳು ಯಾರನ್ನು ತೇಜೋವಧೆ ಮಾಡದೆ ಗುಣಮಟ್ಟದ ಪ್ರಚಾರ ನಡೆಸಿದ್ದೇವೆ. ಜನರಿಗೆ ಕೊಟ್ಟಂತಹ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಏಕಾಂಗಿಯಾಗಿ ನಾನೇನು ಮಾಡಲು ಸಾಧ್ಯವಿಲ್ಲ ತಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಮಾಡಬಹುದಾಗಿದೆ ಎಂದರು.
ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ನಂತರ ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿ ಆಲಸ್ಯ ಕಾಣಿಸುತ್ತಿದೆ. ಪಕ್ಷದ ಸಂಘಟನೆ ಮತ್ತಷ್ಟು ಗಟ್ಟಿಯಾಗಬೇಕು. ಮುಂದಿನ ದಿನದಲ್ಲಿ ನಮ್ಮ ಮುಂದೆ ದೊಡ್ಡ ಸವಾಲುಗಳು ಇರುವುದರಿಂದ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಜಾಗೃತಿಗೊಂಡು ಕೆಲಸ ಮಾಡಬೇಕು. ಪಕ್ಷ ನೀಡಿರುವ ಭರವಸೆಗಳನ್ನು ಜನರ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಅಧಿಕಾರಿಗಳೊಂದಿಗೆ ಉತ್ತಮವಾದ ಒಡನಾಟ ಇಟ್ಟುಕೊಂಡು ಬಡ ಜನತೆಯ ಕೆಲಸಗಳನ್ನು ಮಾಡಿಸುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಪಿಸಿಸಿ ರಾಜ್ಯ ವಕ್ತಾರರಾದ ಮೇರಿಯಂಡ ಸಂಕೇತ್ ಪೂವಯ್ಯ ಕ್ಷೇತ್ರದ ಶಾಸಕರು ಆಯ್ಕೆಯಾದ ನಂತರ ದಿನದ ೧೮ ಗಂಟೆಗಳು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.
ಇದರ ಮಧ್ಯೆ ಅಧಿಕಾರಿಗಳ ಸಭೆ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಕಾರ್ಯಕರ್ತರ ಸಣ್ಣಪುಟ್ಟ ಸಮಸ್ಯೆಗಳಿಗೆ ಪಕ್ಷದ ಆಯಾಯ ಭಾಗದ ಜವಾಬ್ದಾರಿಯ ಪದಾಧಿಕಾರಿಗಳು ಪರಿಹಾರವನ್ನು ಕಲ್ಪಿಸಬೇಕು. ಎಲ್ಲವನ್ನು ಶಾಸಕರ ಹೆಗಲಿಗೆ ಹೊರಿಸಬಾರದು ತಮ್ಮ ಹಂತದಲ್ಲಿ ಆಗುವ ಕೆಲಸವನ್ನು ತಾವೇ ಮುಂದೆ ನಿಂತು ಮಾಡಿಸಿಕೊಡಬೇಕು, ಅಗತ್ಯವಿದ್ದಲ್ಲಿ ಶಾಸಕರ ಬಳಿ ಕಾರ್ಯಕರ್ತರನ್ನು ಕರೆದೊಯ್ದು ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಕೋಳೆರ ಭಾರತಿ ಹಾಗೂ ಪದಾಧಿಕಾರಿಗಳು ನೂತನ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಹಿರಿಯ ನಾಗರಿಕರಾದ ಸಿ.ಕೆ.ಸೋಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮುಕ್ಕಾಟಿರ ಶಿವು ಮಾದಪ್ಪ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾದ ಮಿದೇರಿರ ನವೀನ್ ಸೇರಿದಂತೆ ಅನೇಕ ಗಣ್ಯರು ಮಾತನಾಡಿದರು.
ವೇದಿಕೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೆರ ಭಾರತಿ, ಎಸ್ಟಿ ಘಟಕದ ಅಧ್ಯಕ್ಷೆ ಪಿ.ಆರ್. ಪಂಕಜ, ಮಣಿಕುಂಞ, ಒಬಿಸಿ ಅಧ್ಯಕ್ಷ ಶರತ್ಕಾಂತ್, ಎಂ. ಮಂಜುಳ, ಡಿಸಿಸಿ ಮಾಜಿ ಅಧ್ಯಕ್ಷ ಪಿ.ಕೆ. ಪೊನ್ನಪ್ಪ, ನಾಪೋಕ್ಲು ಬ್ಲಾಕ್ ಅಧ್ಯಕ ಇಸ್ಮಾಯಿಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ಡಿಸಿಸಿ ಉಪಾಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲೀರ ರಶೀದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು ಸ್ವಾಗತಿಸಿದರು. ಹುದಿಕೇರಿ ವಲಯ ಅಧ್ಯಕ್ಷ ಚಂಗುಲAಡ ಸೂರಜ್ ವಂದಿಸಿದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ನ ವಿವಿಧ ವಲಯ ಅಧ್ಯಕ್ಷರುಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.