(ವರದಿ : ಪ್ರಜ್ವಲ್ ಜಿ.ಆರ್.)
ಮಡಿಕೇರಿ, ಜೂ. ೧೫: ನಿರ್ಜನ ಭೂ-ಪ್ರದೇಶ, ಆಗಸದೆತ್ತರಕ್ಕೆ ಏರಿರುವ ಕಸ-ತ್ಯಾಜ್ಯಗಳಿಂದ ನಿರ್ಮಿತವಾದ ಕಟ್ಟಡಗಳು, ಇವು ಒಂದು ಸಿನಿಮಾದಲ್ಲಿನ ಚಿತ್ರಣವಾಗಿದೆ. ಈ ಸಿನಿಮಾವು ೭೦೦ ವರ್ಷ ಭವಿಷ್ಯದಲ್ಲಿನ ಭೂಮಿಯ ಚಿತ್ರಣವನ್ನು ತೋರಿಸುತ್ತದೆ. ಕಸ ವಿಲೇವಾರಿ ಸಮಸ್ಯೆಯು ಉಲ್ಬಣಗೊಂಡಾಗ, ಭೂಮಿಯನ್ನೇ ತ್ಯಜಿಸಿ ಇತರ ಗ್ರಹಗಳಿಗೆ ಹೋಗುವ ಒಂದು ಪರಿಕಲ್ಪನೆಯಲ್ಲಿ ಈ ಸಿನಿಮಾ ಮೂಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿತ್ತು. ಇದು ಕೇವಲ ಸಿನಿಮಾದಲ್ಲಾಗಿದ್ದರೂ, ಇದೀಗ ನಮ್ಮ ಮಡಿಕೇರಿಯಲ್ಲಿನ ಸ್ಟೋನ್ ಹಿಲ್ ಗುಡ್ಡದ ಸ್ಥಿತಿ ನೋಡಿದರೆ, ಮುಂದೊAದು ದಿನ ಗುಡ್ಡದಲ್ಲಿ ಜಾಗ ಖಾಲಿಯಾಗಿ ನಗರ ಪ್ರದೇಶದಲ್ಲಿಯೇ ಕಸವನ್ನು ವಿಲೇವಾರಿ ಮಾಡುವಂತಹ ಪರಿಸ್ಥಿತಿ ಎದುರಾಗಬಹುದೆಂದು ಭಾಸವಾಗುತ್ತಿದೆ.
ನಿಗದಿತ ಸ್ಥಳದಲ್ಲಿಲ್ಲ ಜಾಗ
ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಸುಮಾರು ೨೫ ಟನ್ ತ್ಯಾಜ್ಯವನ್ನು ಮನೆ-ಮನೆಯಿಂದ ಕಸ ಸಂಗ್ರಹಾತಿ ವಾಹನದ ಮೂಲಕ ಸಂಗ್ರಹಿಸಿ ಸ್ಟೋನ್ಹಿಲ್ನಲ್ಲಿ ಸುರಿಯಲಾಗುತ್ತದೆ. ಈ ಗುಡ್ಡದಲ್ಲಿ ನಿಗದಿತ ಸ್ಥಳವನ್ನು ಗುರುತಿಸಿ ಅಲ್ಲೇ ಕಸ ವಿಲೇವಾರಿ ಮಾಡುವಂತೆ ಸೂಚನೆಯಿದ್ದರೂ, ಇದೀಗ ನಿರ್ದಿಷ್ಟ ಸ್ಥಳವಲ್ಲದ ಇನ್ನಿತರ ಕಡೆಗಳಲ್ಲಿಯೂ ಕಸ ಹರಡಿ ಚಲ್ಲಾಪಿಲ್ಲಿಯಾಗಿದ್ದು, ಕಸದ ಗುಡ್ಡವು ಇನ್ನೂ ವಿಸ್ತೃತಗೊಂಡು ಮಾಲಿನ್ಯ ಹೆಚ್ಚಾಗುತ್ತಿದೆ. ನಿಗದಿತ ಸ್ಥಳದಲ್ಲಿ ವಿಲೇ ಆದ ಕಸವು ಬರೆ ಜಾರಿದಂತೆ ಕೆಳಕ್ಕೆ ಜಾರಿದೆ. ಇದೇ ರೀತಿ ಇಲ್ಲಿ ಕಸ ವಿಲೇವಾರಿ ಮುಂದುವರಿದರೆ, ಮುಂದೊAದು ದಿನ ಇಡೀ ಬೆಟ್ಟದಲ್ಲೇ ಜಾಗ ಖಾಲಿಯಾಗುವ ಸಾಧ್ಯತೆಯಿದೆ.
‘ಹಸಿ ಕಸ - ಒಣ ಕಸ’
ಹಾಡಿಗೆ ಮಾತ್ರ ಸೀಮಿತ
ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಸಾರ್ವಜನಿಕರು ಕಸ ನೀಡುವಂತೆ ವಾಹನಗಳಲ್ಲಿ ಬೆಳಿಗ್ಗೆ ಹಾಡುಗಳ ಮೂಲಕ ಪ್ರಚಾರ ನಡೆಸಲಾಗುತ್ತಿದೆ. ಆದರೆ, ಕೆಲವರು ಎಲ್ಲಾ ಕಸವನ್ನು ಒಂದೇ ಬುಟ್ಟಿಯಲ್ಲಿಯೇ ತಂದು ವಾಹನಕ್ಕೆ ನೀಡುತ್ತಾರೆ. ಇನ್ನು ಕೆಲವರು ವಿಂಗಡಿಸಿ ನೀಡಿದರೂ ಅದು ಪ್ರಯೋಜನವಿಲ್ಲ. ಏಕೆಂದರೆ, ಬೆಟ್ಟಕ್ಕೆ ಕಸ ಬಂದ ಮೇಲೆ ಎಲ್ಲ ಕಸವನ್ನು ಮಿಶ್ರಣ ಮಾಡಲಾಗುತ್ತಿದೆ. ಇಲ್ಲಿ ಪೌರಕಾರ್ಮಿಕರೋರ್ವರು
ಮಾಸ್ಕ್ ಕೂಡ ಧರಿಸದೆ ಕಸ ವಿಂಗಡಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಬೆಟ್ಟದ ಮತ್ತೊಂದೆಡೆ ಅಪಾಯಕಾರಿ ‘ಮೆಡಿಕಲ್ ವೇಸ್ಟ್’ ನ ರಾಶಿ ಕೂಡ ಬಿದ್ದು ಗಬ್ಬು ನಾರುತ್ತಿದೆ.
ಕೆಟ್ಟು ನಿಂತಿರುವ ಹಸಿ-ಕಸ ವಿಂಗಡಣಾ ಯಂತ್ರ
೨೦೨೧ರಲ್ಲಿ ರೂ.೩೦ ಲಕ್ಷ ವೆಚ್ಚದಲ್ಲಿ ಹಸಿ-ಕಸ ವಿಂಗಡಣಾ ಯಂತ್ರಗಳನ್ನು ಬೆಟ್ಟದಲ್ಲಿ ಅಳವಡಿಸಿ ಸೂಕ್ತವಾದ ಹಸಿ ತ್ಯಾಜ್ಯದಿಂದ ಗೊಬ್ಬರ ಇತ್ಯಾದಿ ಉತ್ಪಾದಿಸಲು ಯೋಜನೆ ಕೈಗೊಳ್ಳಲಾಯಿತಾದರೂ ಯಂತ್ರಗಳು ಕೆಟ್ಟು ನಿಂತ ಪರಿಣಾಮ ಯಾವುದೇ ಪ್ರಗತಿ ಈ ದಾರಿಯಲ್ಲಿ ಆಗಿಲ್ಲ. ಈ ಬಗ್ಗೆ ನಗರಸಭೆ ತಲೆಯೇ ಕೆಡಿಸಿಕೊಂಡಿಲ್ಲ
ಟೆಂಡರ್ದಾರರ ಹಿಂಜರಿಕೆ
ವರ್ಷಾನುಗಟ್ಟಲೆಯಿAದ ಬೆಟ್ಟದಲ್ಲಿರುವ ‘ಲೆಗಸಿ ವೇಸ್ಟ್’ ಸೂಕ್ತ ವಿಲೇವಾರಿಗೆ ನಗರಸಭೆಯು ಡಿ.ಪಿ.ಆರ್ ತಯಾರಿಸಿ ಟೆಂಡರ್ ಆಹ್ವಾನಿಸಿತ್ತು. ಆದರೀಗ ಟೆಂಡರ್ದಾರರು ವಿಲೇವಾರಿ ಕಾರ್ಯದಿಂದ ಹಿಂಜರಿದಿದ್ದಾರೆ. (ಮೊದಲ ಪುಟದಿಂದ) ಕಸವು ಅಲ್ಲೇ ಉಳಿದು ಗಾತ್ರದಲ್ಲಿ ಬೆಳೆಯುತ್ತಲಿದೆ. ಇದೀಗ ರೂ.೬.೬೯ ಕೋಟಿ ವೆಚ್ಚದಲ್ಲಿ ಪರಿಷ್ಕೃತ ಡಿ.ಪಿ.ಆರ್ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದ್ದು, ಅನುಮೋದನೆ ಆಗಬೇಕಿದೆ.
ಮೊಣ್ಣಂಗೇರಿ ಬಳಿಯ ಘಟಕದಲ್ಲಿ
ಬರಿ ಬೇಲಿ ನಿರ್ಮಾಣ
ಮಡಿಕೇರಿ ನಗರದ ಕಸವನ್ನು ಸೂಕ್ತವಾಗಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮೊಣ್ಣಂಗೇರಿ ಬಳಿಯಲ್ಲಿ ೧೦ ಎಕರೆ ಜಾಗವನ್ನು ೨ ವರ್ಷಗಳಿಂದಲೇ ಗುರುತಿಸಿದ್ದರೂ ಅಲ್ಲಿ ಕೇವಲ ಬೇಲಿ ನಿರ್ಮಾಣ ಕಾರ್ಯ ಮಾತ್ರ ಪೂರ್ಣಗೊಂಡಿದೆ. ನಗರಸಭೆ ವತಿಯಿಂದ ಇಲ್ಲಿ ಘಟಕ ನಿರ್ಮಾಣಕ್ಕೆ ವಿಸ್ತೃತ ವರಿದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆಯಾದರೂ ಅನುಮೋದನಗೊಂಡಿಲ್ಲ ಎಂಬುದಾಗಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಅವರು ಮಾಹಿತಿಯಿತ್ತಿದ್ದಾರೆ.
ಶಾಸಕರ ಗಮನ ಅಗತ್ಯ
ಮಡಿಕೇರಿ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ಶಾಸಕ ಮಂಥರ್ ಗೌಡ ಅವರು, ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇತರ ವಿಷಯಗಳೊಂದಿಗೆ ಸೂಕ್ತ ಕಸ ವಿಲೇವಾರಿಗೆ ಒತ್ತು ನೀಡುವ ಅಂಶವನ್ನೂ ಒಳಪಡಿಸಿದ್ದರು. ಮಡಿಕೇರಿ ನಗರವು ಜಿಲ್ಲಾ ಕೇಂದ್ರವಾಗಿದ್ದರೂ ಇಲ್ಲಿ ಕಸ ವಿಲೇವಾರಿ ಘಟಕ ಇಲ್ಲದಿರುವ ಬಗ್ಗೆ ಅವರು ಗಮನಿಸಿ ‘ಲೆಗಸಿ ವೇಸ್ಟ್’, ಡಿ.ಪಿ.ಆರ್ ಅನುಮೋದನೆಯನ್ನು ಸರಕಾರೀ ಮಟ್ಟದಲ್ಲಿ ಶೀಘ್ರವಾಗಿ ಮಾಡಿಸುವಂತಾಗಬೇಕು ಹಾಗೂ ಮೊಣ್ಣಂಗೇರಿಯಲ್ಲಿನ ಗುರುತಿಸಲಾದ ಕಸ ವಿಲೇವಾರಿ ಘಟಕವನ್ನು ಪ್ರಾರಂಭಿಸಲು ಗಮನ ಹರಿಸಿ ಕಾರ್ಯೋನ್ಮುಖರಾಗಬೇಕಿದೆ.