ಸೋಮವಾರಪೇಟೆ, ಜೂ. ೧೫: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದ ಕೊಂಬೆ ಬಿದ್ದು ವಿವಾಹಿತ ವ್ಯಕ್ತಿಯೋರ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರ ನಿವಾಸಿ ತೀರ್ಥ (೩೪) ಎಂಬವರೇ ಸಾವಿಗೀಡಾದವರು. ತೀರ್ಥ ಅವರ ತೋಟದಲ್ಲಿ ಸಿಲ್ವರ್ ಮರಗಳನ್ನು ಟಿಂಬರ್ ನೀಡಲಾಗಿದ್ದು, ಮೇಲ್ಭಾಗದ ಕೊಂಬೆಗಳನ್ನು ಸೌದೆಗಾಗಿ ತುಂಡರಿಸುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ನಿನ್ನೆ ಸಂಜೆ ವೇಳೆಯಲ್ಲಿ ಯಂತ್ರದ ಮೂಲಕ ಕೊಂಬೆಗಳನ್ನು ತುಂಡರಿಸುತ್ತಿದ್ದ ಸಂದರ್ಭ ಮತ್ತೊಂದು ಮರದ ಕೊಂಬೆ ಕೆಳಬಿದ್ದಿದ್ದು, ತಲೆಯ ಭಾಗಕ್ಕೆ ಅಪ್ಪಳಿದ ಪರಿಣಾಮ ತೀರ್ಥ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ.

ಸ್ಥಳಕ್ಕೆ ಶನಿವಾರಸಂತೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೀರ್ಥ ಅವರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಗೌಡಳ್ಳಿ ಸಾರ್ವಜನಿಕ ರುದ್ರಭೂಮಿಯಲ್ಲಿ ನಡೆಯಿತು.